ಗುಣಮಟ್ಟ ಕಾಪಾಡಬೇಕು, ಕಳಪೆ ಕಾಮಗಾರಿ ಸಹಿಸಲ್ಲ: ಪ್ರಿಯಾಂಕ್ ಖರ್ಗೆ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಒಳಚರಂಡಿ, ಕುಡಿಯುವ ನೀರಿನ ಕಾಮಗಾರಿ, ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡದಿದ್ದರೆ ಸಹಿಸುವ ಮಾತೆ ಇಲ್ಲ ಎಂದು ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದಲ್ಲಿನ ತಾಲೂಕು ಆಡಳಿತದ ಪ್ರಜಾಸೌಧ ಕಟ್ಟಡದ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಸಾಕಷ್ಟು ಅನುದಾನ ತಂದರೂ, ಕೆಲಸ ಮಾಡಲು ಅವಕಾಶವಿದ್ದರೂ, ಅಧಿಕಾರಿಗಳು ಮಾತ್ರ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ವರ್ಗಾವಣೆಗೆ ಎಷ್ಟೊಂದು ಪೈಪೋಟಿ ನಡೆಸುತ್ತಿರಿ. ಸಂಬಳಕ್ಕಾಗಿ ಕೆಲಸ ಮಾಡಬೇಡಿ, ನಿಮ್ಮ ಅನುಭವ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಚಾಟಿ ಬೀಸಿದರು.

ಕ್ಷೇತ್ರದಲ್ಲಿ ಹೈನುಗಾರಿಕೆಗೆ ಉತ್ತೇಜನ ತೋಟಗಾರಿಕೆ ಬೆಳೆಗಳು ಬೆಳೆಯಲು ಪ್ರೋತ್ಸಾಹ ನೀಡಬೇಕು ಹಾಗೂ ಕೃಷಿಯಲ್ಲಿ ಆದಾಯ ಹೆಚ್ಚಳದ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ರಸಗೊಬ್ಬರ ಡಿಎಪಿ ಕೊರತೆ ಆಗದಿರಲಿ ಎಂದರು.

ಶಾಲೆಗೆ ಇಂದಿರಾ ಗಾಂಧಿ ಹೆಸರಿಡಿ
ಪಟ್ಟಣದಲ್ಲಿನ ನೂತನ ಶಾಲಾ ಕಟ್ಟಡಕ್ಕೆ ಇಂದಿರಾ ಗಾಂಧಿ ಹೆಸರಿಡಬೇಕು. ಶಾಲೆ ಉದ್ಘಾಟನೆ ಸಮಯದಲ್ಲಿ ನಾಮಫಲಕ ಹಾಕಿರಬೇಕು. ಮಕ್ಕಳ ಪ್ರವೇಶ ದಾಖಲಾತಿ, ಹಾಜರಾತಿ ಆಧರಿಸಿ ಶಾಲೆಗೆ ಬೇಕಾದ ಕಟ್ಟಡ, ಮೈದಾನ, ತಡೆಗೋಡೆ, ನೀರು, ಶೌಚಾಲಯ ಸೇರಿದಂತೆ ಬೇಡಿಕೆ ವರದಿ ಸಲ್ಲಿಸಿದರೆ ಅನುದಾನ ಒದಗಿಸುತ್ತೆನೆ ಎಂದು ಬಿಇಒಗೆ ಸೂಚಿಸಿದರು.

ಮದ್ಯ ಅಕ್ರಮ ಮಾರಾಟ ತಡೆಯಿರಿ
ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ದೂರು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಮದ್ಯದ ಬಾಟಲಿ ದೊರೆಯುತ್ತಿವೆ ಎಂದರೆ ಏನರ್ಥ ? ನಿಮಗೆ ಮಾರಾಟದ ಟಾರ್ಗೆಟ್ ಏನೆ ಇರಲಿ. ಮದ್ಯ ಅಕ್ರಮ ಮಾರಾಟ ಮಾಡುವಂತಿಲ್ಲ ಎಂದು ಸಚಿವರು ಅಬಕಾರಿ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು.

ಇಎಸ್ಐಸಿ ಆಸ್ಪತ್ರೆ ಅಕ್ರಮ ಬಯಲಿಗೆ
ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಶಾಹಾಬಾದ್ ಇಎಸ್ಐಸಿ ಅಸ್ಪತ್ರೆಗೆ ಶೃಂಗಾರ ಮಾಡಿದ್ದೆ ಹೆಚ್ಚು. ಅದರಿಂದ ಜನರಿಗೆ ಯಾವ ಉಪಯೋಗವಾಗಿಲ್ಲ. ತನಿಖಾ ವರದಿ ಸಿದ್ದವಿದೆ. ಮುಖ್ಯಮಂತ್ರಿ ಅನುಮೋದನೆ ನೀಡಿದಾಕ್ಷಣ ಅಕ್ರಮ ಬಹಿರಂಗ ಮಾಡುತ್ತೆನೆ ಎಂದರು.

1,085 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಇಲಾಖೆಗಳ 1,085 ಕೋಟಿ ಮೊತ್ತದ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು 85 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಸಮಾರಂಭ ಮಾ.8 ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದು, ಸಿದ್ದತೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮನೂರು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯದಲ್ಲಿಯೆ ಅತಿ ಹೆಚ್ಚು ಅನುದಾನ ತಂದಿದ್ದಾರೆ. ಅಧಿಕಾರಿಗಳು ದಕ್ಷತೆಯಿಂದ ಕಾಲಮಿತಿಯೊಳಗೆ ಕಾಮಗಾರಿ ಮಾಡಿಸಿ ಸಚಿವರಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು..

ಸಭೆಯಲ್ಲಿ ತೊಗರಿ ಮಂಡಳಿ ಅಧ್ಯಕ್ಷ ಮಹೆಮುದ್ ಸಾಹೇಬ್, ಜಿಲ್ಲಾಧಿಕಾರಿ ಬಿ.ಫೌಜೀಯಾ ತರನ್ನುಮ್, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಸೇಡಂ ಉಪ ವಿಬಾಗಾಧಿಕಾರಿ ಪ್ರಭುರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *