ಸುದ್ದಿ ಸಂಗ್ರಹ ಕಲಬುರಗಿ
ವಂದೇ ಮಾತರಂ ಹೆಸರಿನಲ್ಲಿ ಬಿಜೆಪಿಯವರು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಬಯಸುತ್ತಿದ್ದಾರೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.
ನಗರದ ಐವಾನ್–ಎ–ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಸಭೆಗಳಲ್ಲಿ ವಂದೇ ಮಾತರಂ ಅನ್ನು ಅಳವಡಿಸಿಕೊಂಡ ಮೊಟ್ಟ ಮೊದಲ ಪಕ್ಷ ಕಾಂಗ್ರೆಸ್. ವಂದೇ ಮಾತರಂ ರಾಷ್ಟ್ರೀಯ ಗೀತೆ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷ. 1950ರಲ್ಲಿ ಈ ತೀರ್ಮಾನವಾಗಿತ್ತು. ಆಗ ವಂದೇ ಮಾತರಂನ ಎರಡು ಚರಣಗಳನ್ನಷ್ಟೆ ರಾಷ್ಟ್ರೀಯ ಗೀತೆಯಾಗಿ ಪರಿಗಣಿಸಲು ನಿರ್ಧರಿಸಲಾಗಿತ್ತು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಅಂದಿನ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೆವೆ’ ಎಂದು ಸಮರ್ಥಿಸಿಕೊಂಡರು.
‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳು ಹಾಗೂ ‘ದಿಮಾಗಿ’ ನಕ್ಸಲರು ಎಂದು ಬಿಂಬಿಸಲಾಗುತ್ತಿದೆ. ಇವೆಲ್ಲವೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವವರಿಗೆ ಹೆಚ್ಚುತ್ತಿರುವ ಹಣೆಪಟ್ಟಿಗಳಷ್ಟೆ’ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.