ಸೋಷಿಯಲ್‌ ಮೀಡಿಯಾ ಮೂಲಕ ಪಾಕ್ ಜೊತೆ ಸಂಪರ್ಕ ಶಂಕೆ: ಇಬ್ಬರು ವಶಕ್ಕೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇಬ್ಬರನ್ನು ಉತ್ತರ ಪ್ರದೇಶದ ಆ್ಯಂಟಿ ಟೆರರ್ ಸ್ಕ್ವಾಡ್ ಮತ್ತು ಕಲಬುರಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಉತ್ತರ ಪ್ರದೇಶ ಮೂಲದ ಸಮೀರ್ ಮತ್ತು ಸಲ್ಮಾನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಉತ್ತರ ಪ್ರದೇಶದ ನಿವಾಸಿ ವಿಳಾಸ ಹೊಂದಿದ್ದಾರೆ. ವಾಟ್ಸ್‌ಆಪ್ ಕಾಲ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಕೆಲವು ದಿನಗಳಿಂದ ಇಬ್ಬರ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿದೆ ಎನ್ನಲಾದ ಕೆಲವು ಸೋಷಿಯಲ್‌ ಮೀಡಿಯಾ ಪೇಜ್‌ಗಳೊಂದಿಗೆ ಸಮೀರ್ ಸಂಪರ್ಕ ಹೊಂದಿದ್ದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನ ಚಲನವಲನದ ಮೇಲೆ ಮಾನಿಟರಿಂಗ್ ನಡೆಸಿದ್ದರು.

ದಾಳಿ ವೇಳೆ ಸಮೀರ್ ಉಳಿದುಕೊಂಡಿದ್ದ ರೂಮ್‌ನಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ. ಈ ಮ್ಯಾಪ್‌ಗಳು ಏಕೆ ಇಡಲಾಗಿತ್ತು, ಅವುಗಳ ಉದ್ದೇಶವೇನು ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಕಲಬುರಗಿಯ ಅಜ್ಞಾತ ಸ್ಥಳದಲ್ಲಿ ಇಬ್ಬರನ್ನೂ ವಿಚಾರಣೆ ನಡೆಸಲಾಗಿದ್ದು, ಬಳಿಕ ಮಹಮ್ಮದ್ ಸಮೀರ್‌ನನ್ನು ಉತ್ತರ ಪ್ರದೇಶದ ATS ತಂಡಕ್ಕೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ. ಪಾಕಿಸ್ತಾನದ ವ್ಯಕ್ತಿಗಳು ಮತ್ತು ವಿವಿಧ ಸಂಘಟನೆಗಳೊಂದಿಗೆ ಆತನಿಗೆ ಯಾವ ರೀತಿಯ ಸಂಪರ್ಕ ಇತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ತನಿಖೆ ಮುಂದುವರಿದಿದ್ದು, ಆರೋಪಿಗಳ ಸಂಪರ್ಕ ಜಾಲ ಮತ್ತು ಸಾಮಾಜಿಕ ಜಾಲತಾಣ ಚಟುವಟಿಕೆಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *