ಸುದ್ದಿ ಸಂಗ್ರಹ ಅಫಜಲಪುರ
ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳಪೆ ಆಹಾರ ಸೇವಿಸಿದ ಪರಿಣಾಮ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಶರಣಬಸಪ್ಪ ಪಾಟೀಲ ಮತ್ತು ವಾರ್ಡನ್ ರವಿ ವಾಲಿ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಶಿವಸ್ವಾಮಿ ಬಿ ಆದೇಶ ಹೊರಡಿಸಿದ್ದು, ಕರ್ತವ್ಯಲೋಪ ಮತ್ತು ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ಹಾಗೂ ಆಹಾರದ ಗುಣಮಟ್ಟ ಕಾಪಾಡುವುದು ಸಂಬಂಧಿತ ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ ನಿರ್ಲಕ್ಷ್ಯದಿಂದ 55 ವಿದ್ಯಾರ್ಥಿಗಳು ಏಕಕಾಲದಲ್ಲಿ ಅಸ್ವಸ್ಥರಾಗುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಥಮಿಕ ಪರಿಶೀಲನೆಯಲ್ಲಿಯೇ ಕರ್ತವ್ಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ. ಘಟನೆ ಕುರಿತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಅವರು ವರದಿ ಸಲ್ಲಿಸಿದ್ದರು.
ಇದಕ್ಕೂ ಮುನ್ನ ಕರ್ತವ್ಯಲೋಪದ ಆಧಾರದಲ್ಲಿ ಐವರು ಅಡುಗೆ ಸಿಬ್ಬಂದಿಯನ್ನು ಜಂಟಿ ನಿರ್ದೇಶಕಿ ಸೇವೆಯಿಂದ ವಜಾಗೊಳಿಸಿದ್ದರು.