ಸುದ್ದಿ ಸಂಗ್ರಹ ಶಹಾಬಾದ
ಪರಿಸರ ರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದ್ದು, ಪ್ರತಿಯೊಬ್ಬರು ಸಸಿ ನೆಟ್ಟು, ಪೋಷಣೆ ಮಾಡಿ, ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಹೇಳಿದರು.
ನಗರದ ಸಂತ ಥಾಮಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ವಿನಾಶ ಮನುಕುಲದಿಂದ ಮಾತ್ರ ಸಾಧ್ಯ, ಇಂದು ಗಿಡ ಮರಗಳ ಕಟಾವಿನಿಂದ ಪರಿಸರ ಹಾಳಾಗುತ್ತಿದೆ. ಇದರ ಪರಿಣಾಮವಾಗಿ ಬಿರುಬಿಸಿಲು, ಬಿರುಗಾಳಿ, ಮಹಾಮಳೆ, ಬರಗಾಲ, ಜಲಪ್ರಳಯ, ಅಕಾಲಿಕ ಮಳೆಗಳು ಸರ್ವೇ ಸಾಮಾನ್ಯವಾಗಿವೆ. ಇದನ್ನು ತಡೆಯಲು ಪ್ರತಿಯೊಬ್ಬರು ವಾತಾವರಣವನ್ನು ಶುದ್ಧವಾಗಿಡಬೇಕಾಗಿದೆ ಎಂದು ಹೇಳಿದರು.
ಸಂತ ಥಾಮಸ ಶಾಲೆಯ ಆಡಳಿತ ಮುಖ್ಯಸ್ಥರಾದ ಫಾದರ್ ಜೆರಾಲ್ಡ್ ಸಾಗರ ಅವರು ಮಾತನಾಡಿ, ನೆಲ, ನೀರು ಮತ್ತು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳಲ್ಲಿ ಪರಿಸರ
ಪ್ರಜ್ಞೆ ಬೆಳೆಸುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಾಲು ಮರದ ತಿಮಕ್ಕನನ್ನು ಮಾದರಿಯಾಗಿ ಇಟ್ಟುಕೊಂಡು ಎಲ್ಲರೂ ಸಸಿ ನೆಟ್ಟು ಮಕ್ಕಳಂತೆ ಕಾಪಾಡಬೇಕು.
ವಿಶ್ವ ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನವು ಪರಿಸರ ದಿನವಾಗಬೇಕು ಎಂದರು.
ನಗರಸಭೆ ಮಾಜಿ ಸದಸ್ಯೆ ಸಾಬೇರಾಬೇಗಂ, ಪತ್ರಕರ್ತ ವಾಸುದೇವ ಚವ್ಹಾಣ್, ಮುಖ್ಯಗುರು ಕಾಣಿಕ್ಯ ಮೇರಿ, ವೇದಿಕೆಯಲ್ಲಿದ್ದರು.
ಪರಿಸರ ದಿನದ ನಿಮಿತ್ತ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 60ಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಸಾಂಸ್ಕೃತಿಕ ಕಾರ್ಯಕ್ರಮ, ನಗರದಲ್ಲಿ ಪ್ರಭಾತ ಫೇರಿ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕಕರು, ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.