ವಿಶ್ವಾದ್ಯಂತ ಇನ್‌ಸ್ಟಾಗ್ರಾಮ್‌, ವಾಟ್ಸಪ್‌, ಫೇಸ್‌ಬುಕ್‌ ಡೌನ್‌

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಸಾಮಾಜಿಕ ಜಾಲತಾಣ ದೈತ್ಯ ‘ಮೆಟಾ’ ಸಂಸ್ಥೆಯ ಒಡೆತನದ ಪ್ರಮುಖ ಆಪ್‌ಗಳಾದ ಇನ್‌ಸ್ಟಾಗ್ರಾಮ್‌, ವಾಟ್ಸಪ್‌ ಮತ್ತು ಫೇಸ್‌ಬುಕ್‌ ಸರ್ವರ್‌ಗಳು ಜಾಗತಿಕ ಮಟ್ಟದಲ್ಲಿ ಏಕಾಏಕಿ ಸ್ಥಗಿತಗೊಂಡಿದ್ದು, ಕೋಟ್ಯಂತರ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ವಿಶ್ವದಾದ್ಯಂತ ಏಕಕಾಲದಲ್ಲಿ ಮೆಟಾ ಸಂಸ್ಥೆಯ ಈ ಮೂರು ಪ್ರಮುಖ ಆಪ್‌ಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಕೆದಾರರು ಲಾಗಿನ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಇನ್‌ಸ್ಟಾಗ್ರಾಮ್: ಬಳಕೆದಾರರಿಗೆ ಫೀಡ್ ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿಲ್ಲ, ಡೈರೆಕ್ಟ್ ಮೆಸೇಜ್‌ಗಳು ಹೋಗುತ್ತಿಲ್ಲ ಮತ್ತು ಸ್ಟೋರಿಗಳನ್ನು ಅಪ್‌ಲೋಡ್ ಮಾಡಲು ತಾಂತ್ರಿಕ ಅಡಚಣೆ ಉಂಟಾಗಿದೆ.

ವಾಟ್ಸಪ್: ಯಾವುದೆ ರೀತಿಯ ಟೆಕ್ಸ್ಟ್ ಮೆಸೇಜ್, ಆಡಿಯೋ, ವಿಡಿಯೋ ಅಥವಾ ಫೈಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಕಾಲಿಂಗ್ ಸೇವೆಯೂ ಸ್ಥಗಿತಗೊಂಡಿದೆ.

ಫೇಸ್‌ಬುಕ್: ಖಾತೆಗಳು ತಾವಾಗಿಯೇ ಲಾಗ್ ಔಟ್ ಆಗುತ್ತಿದ್ದು, ಹೊಸದಾಗಿ ಲಾಗಿನ್ ಮಾಡಲು ಹೋದಾಗ ‘ಸರ್ವರ್ ದೋಷ’ ಎಂಬ ಸಂದೇಶ ಕಾಣಿಸುತ್ತಿದೆ. ಲೈಕ್ ಮತ್ತು ಕಮೆಂಟ್ ಫೀಚರ್‌ಗಳೂ ಸ್ಥಗಿತಗೊಂಡಿವೆ.

ಮೆಟಾ ಆಪ್‌ಗಳು ಕೈಕೊಡುತ್ತಿದ್ದಂತೆ ಜಾಗತಿಕವಾಗಿ ಲಕ್ಷಾಂತರ ಬಳಕೆದಾರರು ಮೈಕ್ರೋಬ್ಲಾಗಿಂಗ್ ತಾಣವಾದ ‘ಎಕ್ಸ್’ ಕಡೆಗೆ ಮುಖ ಮಾಡಿದ್ದಾರೆ. ಎಕ್ಸ್‌ನಲ್ಲಿ #InstagramDown, #WhatsAppDown ಮತ್ತು #FacebookDown ಎಂಬ ಹ್ಯಾಶ್‌ಟ್ಯಾಗ್‌ಗಳು ಟಾಪ್ ಟ್ರೆಂಡಿಂಗ್‌ನಲ್ಲಿವೆ. ಬಳಕೆದಾರರು ಮೀಮ್ಸ್ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ತಾಂತ್ರಿಕ ದೋಷದ ಕುರಿತು ಮೆಟಾ ಸಂಸ್ಥೆಯ ತಾಂತ್ರಿಕ ತಂಡಕ್ಕೆ ಈಗಾಗಲೆ ಮಾಹಿತಿ ತಲುಪಿದ್ದು, ಸರ್ವರ್‌ಗಳನ್ನು ಮರುಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲೆ ಎಲ್ಲಾ ಸೇವೆಗಳು ಯಥಾಸ್ಥಿತಿಗೆ ಮರಳಲಿವೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ದೋಷವೇ ಅಥವಾ ಸರ್ವರ್ ಓವರ್‌ಲೋಡ್ ಕಾರಣವೇ ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *