ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್‌

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಭೇಟಿಯ ಬೆನ್ನಲ್ಲೆ, ಇಂದು ಸಂಜೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೊಡ್ಡಗೌಡರ ಅಧಿಕೃತ ನಿವಾಸಕ್ಕೆ ಖುದ್ದಾಗಿ ಆಗಮಿಸಿದ ಡಿ.ಕೆ ಶಿವಕುಮಾರ್, ಹಿರಿಯ ಮುತ್ಸದ್ದಿ ನಾಯಕನಿಗೆ ಗೌರವ ಸಲ್ಲಿಸಿದರು.

ಹೆಚ್.ಡಿ ದೇವೇಗೌಡರನ್ನು ಭೇಟಿಯಾದ ಡಿ.ಕೆ ಶಿವಕುಮಾರ್, ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಇಂದು ಸಂಜೆ ನಡೆಯಲಿರುವ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರುವಂತೆ ಅತ್ಯಂತ ಗೌರವಪೂರ್ವಕವಾಗಿ ಆಹ್ವಾನಿಸಿದರು. ಇದೆ ವೇಳೆ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕಾಗಿ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರ ಸದಾ ಇರಬೇಕೆಂದು ಕೋರಿದರು.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿರುವ ಈ ಅದ್ಧೂರಿ ಕಾರ್ಯಕ್ರಮವು ಇಂದು ಸಂಜೆ ಲೋಕಭವನದ ಭವ್ಯ ಗಾಜಿನ ಮನೆಯಲ್ಲಿ ಜರುಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ಇಬ್ಬರೂ ದೈತ್ಯ ಹಿರಿಯ ನಾಯಕರನ್ನು ಖುದ್ದಾಗಿ ಆಹ್ವಾನಿಸುವ ಮೂಲಕ ಡಿಕೆಶಿ ಹೊಸ ರಾಜಕೀಯ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

1985ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲೆ ಇದೆ ಹೆಚ್.ಡಿ ದೇವೇಗೌಡರ ವಿರುದ್ಧ ಸ್ಪರ್ಧಿಸುವ ಮೂಲಕ ಡಿಕೆ ಶಿವಕುಮಾರ್‌ ರಾಜಕೀಯ ಜೀವನ ಆರಂಭಿಸಿದ್ದರು. ವಿರೋಧ ಪಕ್ಷಗಳ ಪ್ರಬಲ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಡಿಕೆಶಿ ಅವರ ಈ ನಡೆ, ಮುಂಬರುವ ದಿನಗಳಲ್ಲಿ ಸವಾಲುಗಳ ಹಾದಿಯಲ್ಲೂ ರಾಜ್ಯವನ್ನು ಮುನ್ನಡೆಸಲು ಪ್ರಬುದ್ಧ ರಾಜತಾಂತ್ರಿಕ ತಂತ್ರಗಾರಿಕೆಯಾಗಿದೆ ಎಂದೆ ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *