3,000 ರೂ.ಗೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಸಚಿವೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕೋಲ್ಕತ್ತಾ
ಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3,000 ರೂ. ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಬಡತನವನ್ನು ಮೆಟ್ಟಿ ನಿಂತು ಶಾಸಕಿಯಾಗಿ ಆಯ್ಕೆಯಾಗಿ, ಇದೀಗ ಸುವೇಂದು ಅಧಿಕಾರಿ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ

ತಿಂಗಳಿಗೆ ಕೇವಲ 3,000 ರೂ. ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಇದೀಗ ಸುವೇಂದು ಸರ್ಕಾರದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದ್ದು, ಮಾಝಿ 1,07,692 ಮತಗಳನ್ನು ಗಳಿಸಿ, ತಮ್ಮ ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸಿದ್ದರು.

ಗುಸ್ಕಾರ ಪುರಸಭೆ ನಿವಾಸಿಯಾಗಿರುವ ಮಾಝಿ, ಸಕ್ರಿಯ ರಾಜಕೀಯಕ್ಕೆ ಕಾಲಿಡುವ ಮೊದಲು ನಾಲ್ಕು ಮನೆಗಳಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಸಾಧಾರಣ ಹಿನ್ನೆಲೆ ಮತ್ತು ಬಲವಾದ ಸ್ಥಳೀಯ ಸಂಪರ್ಕಗಳಿಂದಾಗಿ ಪ್ರಚಾರದ ಸಮಯದಲ್ಲಿ ಅವರ ಉಮೇದುವಾರಿಕೆ ಗಮನ ಸೆಳೆಯಿತು.

ಮಾಝಿ ಈ ಹಿಂದೆ 2021ರ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ವಿರುದ್ಧ 11,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. ಈ ಬಾರಿಯೂ ಬಿಜೆಪಿ ಅವರಿಗೆ ಟಿಕೆಟ್ ನೀಡಿತ್ತು.

ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾಝಿ, ನಾನು ತುಂಬಾ ಸಂತೋಷವಾಗಿದ್ದೆನೆ ಮತ್ತು ಪ್ರಧಾನಿ ನರೇಂದ್ರ ಮೋದಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೆನೆ. ಇಂದು ನನ್ನ ಈ ಗೆಲುವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡುತ್ತೆನೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಸರಿಯಾದ ರಸ್ತೆಗಳು ಮತ್ತು ಕುಡಿಯುವ ನೀರು ಎಲ್ಲರ ಮನೆಗಳಿಗೆ ತಲುಪುವಂತೆ ನೋಡಿಕೊಳ್ಳುವುದು ನನ್ನ ಮುಖ್ಯ ಗುರಿಯಾಗಿದೆ. ಮೂಲಭೂತ ಸೌಕರ್ಯ ಸೇರಿದಂತೆ ಯುವಕರ ಅಭಿವೃದ್ಧಿ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿಯೂ ನಾನು ಕೆಲಸ ಮಾಡುತ್ತೆನೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *