ಸುದ್ದಿ ಸಂಗ್ರಹ ಬೀದರ್/ಶಿವಮೊಗ್ಗ/ಕಾರವಾರ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಗಡಿ ಜಿಲ್ಲೆ ಬೀದರ್ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಒಂದು ಗಂಟೆಯಿಂದಲೂ ಬೀದರ್ನಲ್ಲಿ ಸಿಡಿಲು, ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಈ ಮೂಲಕ ಬಿಸಿಲಿನಿಂದ ಕೆಂಗೆಟ್ಟಿದ್ದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದ್, ಚಿಟ್ಟಗುಪ್ಪ, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಬೀದರ್ನಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಇಂದಿನಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇನ್ನು ಶಿವಮೊಗ್ಗದಲ್ಲೂ ಸಿಡಿಲು, ಗುಡುಗಿನ ಜೊತೆ ಮಳೆ ಆರಂಭವಾಗಿದೆ. ಶಿವಮೊಗ್ಗ ನಗರ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಬಿರು ಬಿಸಿಲಿನಿಂದ ಕಾದಿದ್ದ ಶಿವಮೊಗ್ಗವನ್ನು ಮಳೆರಾಯ ತಣ್ಣಗಾಗಿಸಿದ್ದಾನೆ. ಕಳೆದ ಅರ್ಧ ಗಂಟೆಯಿಂದ ಜೋರು ಮಳೆಯಾಗುತ್ತಿದೆ. ಭಾರಿ ಮಳೆಗೆ ಶಿವಮೊಗ್ಗ ಕೂಲ್ ಕೂಲ್ ಆಗಿದೆ.
ದಾಂಡೇಲಿಯಲ್ಲೂ ಗಾಳಿ-ಮಳೆಯ ಅಬ್ಬರ ಹೆಚ್ಚಾಗಿದ್ದು, ನಗರದ ಹಲವು ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿಗೆ ಅಂಗಡಿಗಳ ಬೋರ್ಡ್ಗಳು ಹಾರಿ ಹೋಗಿ ಹಾನಿಯಾಗಿದೆ. ಅಂಗಡಿಗಳಿಗೆ ಮಳೆ ನೀರು ನುಗ್ಗಿ ವ್ಯಾಪಾರಿಗಳಿಗೆ ತೊಂದರೆಯುಂಟಾಗಿದೆ. ರಸ್ತೆಗಳ ಮೇಲೆ ಮರದ ಕೊಂಬೆಗಳು, ಗಿಡಗಂಟೆಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಸ್ಪತ್ರೆ ಮುಂಭಾಗಕ್ಕೂ ಮಳೆ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ಕೆಲಕಾಲ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಿದ್ದಾರೆ.