ಸುದ್ದಿ ಸಂಗ್ರಹ ಕಲಬುರಗಿ
ವಿಮಾನ ಸೇವೆ ವಿಷಯದಲ್ಲಿ ಕಲಬುರಗಿ- ಬೀದರ್ ಜಿಲ್ಲೆಯ ಜನರಿಗೆ ಇದೊಂದು ಖುಷಿ ಸುದ್ದಿ. ಎರಡು ಜಿಲ್ಲೆಗಳ ಏರ್ಪೋರ್ಟ್ನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ತಿಂಗಳಲ್ಲಿ ಆರಂಭಿಸುವ ಸಿದ್ಧತೆಗಳು ನಡೆದಿವೆ.
ಕಲಬುರಗಿ ಏರ್ಪೋರ್ಟನಿಂದ 2025ರ ಅಕ್ಟೋಬರ್ 15ಕ್ಕೆ ಮತ್ತು ಬೀದರ್ನಿಂದ 2026ರ ಏಪ್ರಿಲ್ 16 ರಿಂದ ವಿಮಾನ ಸೇವೆ ಸ್ಥಗಿತವಾಗಿತ್ತು. ಎರಡು ಜಿಲ್ಲೆಗಳಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸ್ಟಾರ್ ಏರ್ ವಿಮಾನ ನಷ್ಟದ ಕಾರಣದಿಂದ ಸ್ಥಗಿತವಾಗಿತ್ತು.
ಆದರೆ ರಾಜ್ಯ ಸರಕಾರ ಇದೀಗ ಸ್ಟಾರ್ ಏರ್ಗೆ ವಿಮಾನ ಸೇವೆಗಳ ನಿರ್ವಹಣೆಗಾಗಿ ಒಂದು ವರ್ಷಕ್ಕೆ 28.47 ಕೋಟಿ ರೂ.ಗಳ ವೆಚ್ಚ ಸರಿದೂಗಿಸುವ ನಿಧಿ (ವಯಾಬಿಲಿಟಿ ಗ್ಯಾಪ್ ಫಂಡ್- ವಿಜಿಎಫ್) ನೀಡಲು ನಿರ್ಧರಿಸಿದೆ. ಎಲ್ಲ ಪ್ರಕ್ರಿಯೆಗಳು ಮುಗಿಯಲು ಹೆಚ್ಚು ಕಮ್ಮಿ 20 ದಿನಗಳಾದರೂ ಬೇಕು. ಎಲ್ಲವೂ ಅಂದುಕೊಂಡಂತೆ ನಡೆದರೆ ತಿಂಗಳಲ್ಲೆ ವಿಮಾನ ಸೇವೆ ಮತ್ತೆ ಶುರುವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಅನುದಾನ ಎಲ್ಲಿಂದ ?
ಉಡಾನ್ ಯೋಜನೆ-1 ಸ್ಥಗಿತವಾಗಿದ್ದರಿಂದ ವಿಮಾನ ಸಂಚಾರ ಆರ್ಥಿಕವಾಗಿ ಕಾರ್ಯಸಾಧುವಲ್ಲ, ಲಾಭ ಆಗುತ್ತಿಲ್ಲ ಎಂಬ ಕಾರಣ ಮುಂದೆ ಮಾಡಿ ಸ್ಟಾರ್ ಏರ್ ವಿಮಾನ ಸೇವೆ ರದ್ದುಪಡಿಸಿತ್ತು. ಎರಡು ಜಿಲ್ಲೆಗಳಲ್ಲಿ ಏರ್ಪೋರ್ಟ್ ಇದ್ದರೂ ವಿಮಾನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಬರಿ ವಿಐಪಿಗಳ ಸಂಚಾರಕ್ಕೆ ಸೀಮಿತವಾಗಿತ್ತು. ಇದನ್ನು ಮನಗಂಡು ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅನುದಾನದಲ್ಲಿ ವಿಜಿಎಫ್ ನೀಡಲು ನಿರ್ಧರಿಸಿದೆ.
ಎಲ್ಲ ಆರ್ಥಿಕ ಹೊರೆ ಮಂಡಳಿ ಮೇಲೆ ಹಾಕದೆ ಸರಕಾರ ಮತ್ತು ಕೆಕೆಆರ್ಡಿಬಿ ತಲಾ 50:50 ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಮೇ.12 ರಂದು ಕೆಕೆಆರ್ಡಿಬಿ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಈ ಮೊತ್ತಕ್ಕೆ ಅನುಮೋದನೆ ಸಿಗಲಿದೆ. ಸಂಪುಟದ ನಿರ್ಧಾರದಂತೆ ಅನುದಾನ ನೀಡಲಿದೆ.
ಬೀದರ್ ಏರ್ಪೋರ್ಟ್ಗೆ ಮಂಡಳಿಯ ಮ್ಯಾಕ್ರೋ ಅನುದಾನದ ಅಡಿ ಕಳೆದ ವರ್ಷ ವಿಜಿಎಫ್ ನೀಡಲಾಗಿತ್ತು. ಕಲಬುರಗಿ ಮತ್ತು ಬೀದರ್ನಿಂದ ಸಂಚರಿಸುವ ವಿಮಾನ ಸೇವೆಯಿಂದ ಸ್ಟಾರ್ ಏರ್ಗೆ ಲಾಭವೂ ಇತ್ತು. ಶೇ.85ಕ್ಕೂ ಹೆಚ್ಚು ಸೀಟುಗಳು ಭರ್ತಿಯಾಗುತ್ತಿದ್ದವು. ನಿಯಮಿತವಾಗಿ ಸೇವೆ ಸಿಗುತ್ತಿದ್ದರೆ ಪ್ರಯಾಣಿಕರು ಸಂಚರಿಸುತ್ತಾರೆ.
ಆದರೆ ಈ ಸಂಸ್ಥೆ ಕ್ರಮೇಣ ಸಮಯದಲ್ಲಿ ವ್ಯತ್ಯಾಸ ಮಾಡಿರುವುದು, ಮೂರು ದಿನಗಳಿಗೊಮ್ಮೆ ಓಡಿಸುವುದು ಮಾಡಿದ್ದರಿಂದ ಪ್ರಯಾಣಿಕರು ಒಲವು ಕಡಿಮೆಯಾಯಿತು. ಹೀಗಾಗಿ ಸೇವೆ ಸಂಪೂರ್ಣವಾಗಿ ಸ್ಥಗಿತವಾಯಿತು ಎನ್ನುತ್ತಾರೆ ಪ್ರಯಾಣಿಕರು.
20 ದಿನಗಳಲ್ಲಿ ಪ್ರಕ್ರಿಯೆ
ಸರಕಾರ ಮತ್ತು ಸ್ಟಾರ್ ಏರ್ ನಡುವೆ ಹಣಕಾಸು ಒಪ್ಪಂದ, ವಿಮಾನಗಳ ಸುಸ್ಥಿರತೆ ಪರಿಶೀಲನೆ, ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಸಿದ್ಧತೆಗಳಿಗಾಗಿ ಸುಮಾರು 20-25 ದಿನಗಳಾದರೂ ಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಿಂಗಳಲ್ಲಿ ವಿಮಾನ ಸೇವೆ ಮತ್ತೆ ಶುರುವಾಗಲಿದೆ ಎನ್ನುತ್ತಾರೆ ಏರ್ಪೋರ್ಟ್ ಅಧಿಕಾರಿಗಳು.
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಫ್ಯೂಯಲ್ ದರ ಸಹ ದುಬಾರಿಯಾಗಿದ್ದು, ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.