ಕಲಬುರಗಿ: ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ನೂತನ ಜಿಲ್ಲಾಧಿಕಾರಿ

ಜಿಲ್ಲೆ

ಕಲಬುರಗಿ: ಬೆಂಗಳೂರಿನ ಆರ್ಥಿಕ ಇಲಾಖೆಯ (ಬಜೆಟ್‌ ಮತ್ತು ಸಂಪನ್ಮೂಲ) ಜಂಟಿ ಕಾರ್ಯದರ್ಶಿಯಾಗಿದ್ದ, 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಮೊಹಮ್ಮದ್‌ ಇಕ್ರಾಮುಲ್ಲಾ ಶರೀಫ್ ಅವರನ್ನು ಕಲಬುರಗಿ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಷರೀಫ್‌ ಅವರು ಪ್ರಸ್ತುತ ಹಣಕಾಸು ಇಲಾಖೆಯ (ಬಜೆಟ್ ಮತ್ತು ಸಂಪನ್ಮೂಲ) ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

ಜಿಲ್ಲಾಧಿಕಾರಿಯಾಗಿದ್ದ ಬಿ.ಫೌಜಿಯಾ ತರನ್ನುಮ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಸುಮಾರು 2 ವರ್ಷ 11 ತಿಂಗಳು ಜಿಲ್ಲಾಧಿಕಾರಿಯಾಗಿದ್ದ ಫೌಜಿಯಾ ತರನ್ನುಮ್ ಅವರು ‘ಕಲಬುರಗಿ ರೊಟ್ಟಿ’ಯನ್ನು ಬ್ರ್ಯಾಂಡ್ ಮಾಡುವಲ್ಲಿ ಹಾಗೂ ಜಿಲ್ಲೆಯ ಕಸೂತಿ ಕಲೆಯನ್ನು ನೀತಿ ಅಯೋಗದವರೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. ನಗರದ ಬಹುಮನಿ ಕೋಟೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್, ಟ್ರೆಕ್ಕಿಂಗ್ ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸಲು ಶ್ರಮಿಸಿದ್ದಾರೆ.

ಕಡತಗಳ ವಿಲೇವಾರಿ, ಇ-ಆಫೀಸ್ ನಿರ್ವಹಣೆಯಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿದ್ದರು.

Leave a Reply

Your email address will not be published. Required fields are marked *