ರಾಜ್ಯದಲ್ಲೇ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು: ಆರೆಂಜ್ ಅಲರ್ಟ್ ಘೋಷಣೆ

ಜಿಲ್ಲೆ

ಸುದ್ದಿ ಸಂಗ್ರಹ ಕಲಬುರಗಿ
ಬುಧವಾರ ರಾಜ್ಯದಲ್ಲಿಯೆ ಅತಿ ಹೆಚ್ಚು ಉಷ್ಣಾಂಶ ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಲಬುರಗಿ ತಾಲೂಕಿನ ಔರಾದ್‌ನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ, ಚಿಂಚೋಳಿ ಹಾಗೂ ಅಫಜಲಪುರ ತಾಲೂಕುಗಳಲ್ಲಿ ತಲಾ 44.03 ಡಿಗ್ರಿ ಸೆಲ್ಸಿಯಸ್, ಆಳಂದ ತಾಲೂಕಿನಲ್ಲಿ 44.01 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಶೇಷವಾಗಿ ಕಲಬುರಗಿ ತಾಲೂಕಿನ ಔರಾದ್ ಗ್ರಾಮದಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಗಮನಾರ್ಹವಾಗಿದೆ.

ಉಷ್ಣಾಂಶದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೆ ಅನಾವಶ್ಯಕವಾಗಿ ಹೊರಗೆ ಬರದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಬಿಸಿಲಿನ ಪರಿಣಾಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಸಾಕಷ್ಟು ನೀರು ಸೇವನೆ, ನೆರಳಿನಲ್ಲಿ ಇರುವಿಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *