ಸುದ್ದಿ ಸಂಗ್ರಹ ನಾಲವಾರ
ಜೀವನವೆಂಬುದು ಸಮುದ್ರದ ಅಲೆಗಳಿದ್ದಂತೆ, ಇಲ್ಲಿ ಏರಿಳಿತಗಳು ಸಹಜ. ಆದರೆ ಅಲೆಗಳಿಗೆ ಹೆದರಿ ದಡ ಸೇರುವುದು ನಿಲ್ಲಿಸಬಾರದು. ಸೋತಾಗ ಹತಾಶರಾಗದೆ, ಗೆದ್ದಾಗ ಉನ್ಮಾದಕ್ಕೊಳಗಾಗದೆ ಬದುಕನ್ನು ಸಮಚಿತ್ತದಿಂದ ಸಾಗಿಸುವುದೆ ನಿಜವಾದ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ಕಲ್ಯಾಣ ಕರ್ನಾಟಕ ಭಾಗದ ಮತ್ತೊಂದು ಪ್ರತಿಷ್ಠಿತ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಮಧ್ಯರಾತ್ರಿಯ ಸಮಯದಲ್ಲೂ ನೆರೆದಿದ್ದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ಬದುಕಿನ ಸಂಕಷ್ಟ ಹಾಗೂ ಸಂಘರ್ಷದ ಸಮಯದಲ್ಲಿ ಕೋಪಕ್ಕೆ ಮತ್ತು ಅವಸರದ ನಿರ್ಧಾರ ಕೈಗೊಳ್ಳದೆ ತಾಳ್ಮೆಯ ಗುಣ ಪ್ರದರ್ಶಿಸಬೇಕು. ಎಂತಹ ಕಠಿಣ ಪರಿಸ್ಥಿತಿ ಬಂದರೂ ಕುಗ್ಗದೆ, ಸಮಾಧಾನದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ನಿರೀಕ್ಷೆಗಳ ಭಾರವನ್ನು ಮೈ ಮನದ ಮೇಲೆ ಹೇರಿಕೊಳ್ಳದೆ, ಇರುವುದರಲ್ಲಿಯೆ ಸಂತೃಪ್ತಿ ಕಾಣುವ ಭಾವ ಬೆಳೆಸಿಕೊಳ್ಳಿ. ಬದುಕಿನಲ್ಲಿ ಸಮಸ್ಯೆಗಳು, ನೋವು ಯಾಕೆ ಬರುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು, ಅವುಗಳನ್ನು ಎದುರಿಸಲು ನಾನೇನು ಮಾಡಬಲ್ಲೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಮುನ್ನಡೆಯುವುದು ಉತ್ತಮ ಎಂದರು.
ಜೀವನ ನಾವೆಣಿಸಿದಂತೆ ಇರಲು ಸಾಧ್ಯವಿಲ್ಲ. ಜಗತ್ತು ಭಗವಂತನ ಕಮ್ಮಟ, ಇಲ್ಲಿ ಎಲ್ಲವನ್ನೂ ಅವನೆ ನಿರ್ಧರಿಸುವನು. ಪ್ರಕೃತಿ ಹಾಗೂ ಭಗವಂತನಿಗೆ ವಿರುದ್ಧವಾಗಿ ಈಜುವ ಹುಚ್ಚು ಸಾಹಸ ಬೇಡ. ಬದುಕಿನಲ್ಲಿ ಬಂದ ಬವಣೆಗಳನ್ನು ಬಗೆಹರಿಸುವ ಭಾರ ಭಗವಂತನ ಮೇಲೆ ಹಾಕಿ ಜೀವನ ಮುನ್ನನಡೆಸಬೇಕು. ಹೀಗಾದಾಗ ಮಾತ್ರ ಸುಂದರ, ಸುಖಿ ಜೀವನ ಸಾಧ್ಯ ಎಂದು ಅರ್ಥಪೂರ್ಣ ಆಶಿರ್ವಚನ ನೀಡಿದರು.
ನಾಲವಾರದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು, ಕೋರಿಸಿದ್ದೇಶ್ವರ ಸಂಸ್ಥಾನ ಮಠವು ಕೇವಲ ಕಲ್ಲು-ಸಿಮೆಂಟುಗಳಿಂದ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತಿ ಅವರ ಮನಸ್ಸುಗಳಲ್ಲಿಯೆ ಕೋರಿಸಿದ್ದೇಶ್ವರ ಶಿವಯೋಗಿ ನೆಲೆಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಲವಾರ ಶ್ರೀಗಳನ್ನು ನೋಡುವುದೆ ಒಂದು ಆನಂದ. ಅವರನ್ನು ಭೇಟಿಯಾಗಿ ಹೋಗಬೇಕೆಂದು ನಾವೇ ಸ್ವ ಇಚ್ಛೆಯಿಂದ ಆಗಮಿಸಿದ್ದು, ಇಂತಹ ಮಧ್ಯರಾತ್ರಿಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಕಂಡು ಮನಸ್ಸು ತುಂಬಿ ಬಂದಿದೆ ಎಂದರು.
ಆಶೀರ್ವಚನ ನೀಡಿದ ನಾಲವಾರ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲತಃ ಕಲಬುರಗಿ ಜಿಲ್ಲೆಯವರಾದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಕೊಪ್ಪಳದ ಗವಿಮಠದ ಮೂಲಕ ನಾಡಿನ ಆಧ್ಯಾತ್ಮಿಕ ಲೋಕ ಬೆಳಗುತ್ತಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ನಾಲವಾರ ಮಠಕ್ಕೆ ಹಾಗೂ ಕೊಪ್ಪಳ ಮಠಕ್ಕೆ ಅವಿನಾಭಾವ ಸುಮಧುರ ಸಂಬಂಧವಿದೆ. ಒಬ್ಬ ಯುವ ಯತಿ ಮನಸ್ಸು ಮಾಡಿದರೆ, ಧಾರ್ಮಿಕ ಕೇಂದ್ರವೊಂದನ್ನು ಅದರ ಜಾತ್ರೆಯನ್ನು ಹೇಗೆ ಜನಮುಖಿಯಾದ ಸಮಾಜಸೇವಾ ಕೈಂಕರ್ಯದ ಮಹಾಯಾತ್ರೆಯಾಗಿ ಬದಲಾಯಿಸಬಹುದು ಎಂಬುದನ್ನು ಜಗತ್ತಿಗೆ ತೋರಿದ ಒಬ್ಬ ಶ್ರೇಷ್ಠ ಸಂತರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕುಕನೂರಿನ ಪೂಜ್ಯ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿ, ನಾಡಿನ ಸಂತ ಶ್ರೇಷ್ಠರಿಬ್ಬರ ಅಪರೂಪದ ಸಮಾಗಮವನ್ನು ಕಣ್ತುಂಬಿಕೊಂಡ ನಾವೆಲ್ಲರೂ ಧನ್ಯರು ಎಂದರು.
ವೇದಿಕೆಯ ಮೇಲೆ ತಾಂಡೂರಿನ, ಯರಗೋಳದ ಪೂಜ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನ ಸದ್ಭಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ಡಾ.ಸಿದ್ಧರಾಜರೆಡ್ಡಿ ಸ್ವಾಗತಿಸಿ, ನಿರೂಪಿಸಿದರು.
ಖ್ಯಾತ ಭರತನಾಟ್ಯ ಕಲಾವಿದೆ ಕು.ಈಶಾ ಪಡಶೆಟ್ಟಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.