ಸುದ್ದಿ ಸಂಗ್ರಹ ಚಿತ್ತಾಪುರ
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯ ನಾಲವಾರದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರೆ ಜ.18 ಮತ್ತು 19ರಂದು ಅದ್ಧೂರಿಯಾಗಿ ನೆರವೇರಲಿದೆ.
ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ದಿಗ್ದರ್ಶನದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ 11 ದಿನ ಮುಂಚಿತವಾಗಿಯೇ ಜ.8 ರಿಂದ ಶ್ರೀಮಠದಲ್ಲಿ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಜ.18ರಂದು ಅವರಾತ್ರಿ ಅಮಾವಾಸ್ಯೆ ದಿನದಂದು ಸಂಜೆ ಜಾತ್ರೆ ಉದ್ಘಾಟನೆ, ಶಿವಾನುಭವ ಚಿಂತನ ನಡೆಯಲಿದ್ದು, ಶ್ರೀಮಠದಿಂದ ನಾಡಿನ ಪ್ರತಿಷ್ಠಿತ ಗಣ್ಯ ಸಾಧಕರಿಗೆ ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಂದೆ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾ ದೀಪಮೇಳವೆಂದೆ ಪ್ರಖ್ಯಾತವಾದ ಭಕ್ತರ ಹರಕೆಯ ತನಾರತಿ ಮಹೋತ್ಸವ ನಡೆಯಲಿದ್ದು,
ನಾಡಿನ-ಪರನಾಡಿನ ಸಾವಿರಾರು ಭಕ್ತರು ಹರಕೆ ಸಮರ್ಪಣೆ ಮಾಡಲಿದ್ದಾರೆ.
ಜ.19 ರಂದು ಸೋಮವಾರ ಸಂಜೆ 6 ಗಂಟೆಗೆ ಸದ್ಗುರು ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ಭವ್ಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಜಾನಪದ ಕಲಾತಂಡಗಳ ಕಲಾ ಪ್ರದರ್ಶನ, ವಿಶೇಷ ಮದ್ದು ಸುಡುವ ಕಾರ್ಯಕ್ರಮಗಳು ರಥೋತ್ಸವದ ಮೆರಗು ಹೆಚ್ಚಿಸಲಿವೆ.
ಜಾತ್ರೆ ಸಿದ್ಧತೆಗಳು ಈಗಾಗಲೆ ಪ್ರಾರಂಭವಾಗಿದ್ದು, ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ದಾಸೋಹ ಮನೆ ಸ್ವಚ್ಛತೆ, ಶ್ರೀಮಠದ ಆವರಣದ ಸಿಂಗಾರ ಸೇರಿ ಹಲವು ಕಾರ್ಯಗಳು ಭಕ್ತರು ಸ್ವಯಂಪ್ರೇರಿತರಾಗಿ
ಮಾಡುತ್ತಿದ್ದಾರೆ.
ಜ.20ಕ್ಕೆ ಬೃಹತ್ ಜಾನುವಾರು ಜಾತ್ರೆ
ಜ.20 ರಿಂದ ಬೃಹತ್ ಜಾನುವಾರು ಜಾತ್ರೆ ನಡೆಯಲಿದೆ. ವಿವಿಧ ಭಾಗಗಳ ಸಾವಿರಾರು ತಳಿಯ ಜಾನುವಾರುಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಉತ್ತಮ ರಾಸುಗಳಿಗೆ ಪ್ರಶಸ್ತಿ ಪ್ರದಾನ ನೀಡಲಾಗುವುದು. ಗ್ರಾಮೀಣ ಕ್ರೀಡೆಗಳಾದ ಕೈಕುಸ್ತಿ ಸೇರಿ ಹಲವು ಕ್ರೀಡೆಗಳು ಆಯೋಜಿಸಲಾಗಿದೆ.
ನಾಡಿನ ಹರಗುರುಚರಮೂರ್ತಿಗಳು, ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳ ದಿಗ್ಗಜರು ಸೇರಿದಂತೆ ಕಲಾವಿದರು ಭಾಗವಹಿಸುವ ಈ ವೈಭವದ ಜಾತ್ರಾ ಮಹೋತ್ಸವದಲ್ಲಿ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಲು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.