ನಕಾರಾತ್ಮಕ ಸುದ್ದಿಗೆ ಕಡಿವಾಣ ಬೀಳಲಿ: ಸಚಿವ ಡಾ.ಶರಣಪ್ರಕಾಶ ಪಾಟೀಲ್

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಮಾಧ್ಯಮ ರಂಗವೂ ಅಭಿಪ್ರಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಜನಾಭಿಪ್ರಾಯದ ಮುಂದೆ ಸರ್ಕಾರಗಳು ತಲೆ ಬಾಗುತ್ತವೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ನಕಾರಾತ್ಮಕ ಸುದ್ದಿ ಕಡಿಮೆ ಮಾಡಬೇಕು ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.

ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ, ಅಭಿನಂದನೆ ಮತ್ತು ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಸಮಾಜಕ್ಕೆ ಉತ್ತಮ ಸಂದೇಶ ಹೊತ್ತೊಯ್ಯಲು, ನಕಾರಾತ್ಮಕ ಸುದ್ದಿಗಳಿಗೆ ಕಡಿವಾಣ ಹಾಕಬೇಕು. ನಿರಂತರ ನಕರಾತ್ಮಕತೆಯಿಂದ ಜನರಲ್ಲಿ ವ್ಯವಸ್ಥೆ ಬಗ್ಗೆ ಜಿಗುಪ್ಸೆ ಬಂದರೆ ಅಪಾಯ. ಸುಧಾರಣೆಗೆ ಸುದ್ದಿ ಆಗಲಿ ಎಂದರು.

ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ ಮಾತನಾಡಿ, ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲ ಮಾಧ್ಯಮ ಮಿತ್ರರ ಸಹಕಾರ ಅಪಾರ. ಪತ್ರಕರ್ತರು ತೋರುವ ಕಾಳಜಿ, ಆಶಯ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಅಪರಾಧ ನಿಯಂತ್ರಣ, ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಪೊಲೀಸ್​ ಮತ್ತು ಪತ್ರಕರ್ತರು ಎತ್ತಿನ ಬಂಡಿ ಇದ್ದಂತೆ, ಅಪರಾಧವನ್ನು ಕಡಿವಾಣ ಹಾಕಲು ಸಹಕಾರಿ ಆಗಿದೆ ಎಂದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಪತ್ರಕರ್ತರ ಸಂ 94 ವಸಂತದಲ್ಲಿದ್ದು, ಇಡಿ ದೇಶದಲ್ಲಿ ಅತ್ಯಂತ ಸುಭದ್ರ ಸಂಟನೆಯಾಗಿದೆ. ಡಿವಿಜಿ ಭದ್ರ ಬುನಾದಿ ಹಾಕಿದ್ದು, ಇದು ಪ್ರಜಾಪ್ರಭುತ್ವದ ಅಡಿ ಚುನಾವಣೆ ನಡೆಸಿ, ಆಯ್ಕೆ ಮಾಡಲಾಗುತ್ತದೆ. ಪತ್ರಕರ್ತ ಎಂಬ ಪವಿತ್ರ ಪದವನ್ನು ಯಾರ್ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂತವರನ್ನು ಹೊರಕಳಿಸಬೇಕಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಚುನಾವಣೆ ಸ್ಪರ್ಧೆಗೆ ಮಾತ್ರ ಆರೋಪ, ಪ್ರತ್ಯಾರೋಪಗಳನ್ನು ಬಿಟ್ಟು, ಒಟ್ಟಾಗಿ ಸಾಗೋಣ. ಕಳೆದ ಮೂರು ವರ್ಷದಿಂದ ಸಂಘದ ಪ್ರಗತಿಗೆ ಶ್ರಮಿಸಿದ್ದು, ಭವಿಷ್ಯದಲ್ಲಿ ಗ್ರಂಥಾಲಯ ಮಾಡುವ, ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ನೈಪುಣ್ಯತೆ ಕಾರ್ಯಾಗಾರ ನಡೆಸುವ ಯೋಜನೆ ಇದೆ. ಪತ್ರಿಕಾ ಭವನದಲ್ಲಿರುವ ಎರಡು ಕೋಣೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಭವನದ ಪಕ್ಕದಲ್ಲಿರುವ ಸರ್ಕಾರಿ ಕಟ್ಟಡ ಪಡೆದು, ಕ್ರೀಡಾಂಗಣ ಮಾಡುವ ಯೋಜನೆ ಇದೆ ಎಂದರು.

ಸಂಘದ ರಾಜ್ಯ ಕಾರ್ಯದರ್ಶಿ ಪಿ.ಲೋಕೇಶ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಪತ್ರಕರ್ತರಾದ ಭವಾನಿಸಿಂಗ್​ ಠಾಕೂರ, ಟಿ.ವಿ ಶಿವಾನಂದನ್​, ದೇವಯ್ಯ ಗುತ್ತೇದಾರ್​, ಪ್ರಭಾಕರ ಜೋಶಿ, ಸಂಗಮನಾಥ ರೇವತಗಾಂವ, ಜಯತೀರ್ಥ ಪಾಟೀಲ್​, ಪ್ರವೀಣ ರೆಡ್ಡಿ, ಶರಣಯ್ಯ ಹಿರೇಮಠ, ವೀರೇಂದ್ರ ಕೊಲ್ಲೂರ ಅಶೋಕ ಕಪನೂರ, ಸತೀಶ ಜೇವರ್ಗಿ ಸೇರಿದಂತೆ ಅನೇಕರು ಇದ್ದರು.

ರಾಜ್ಯ ಕಾರ್ಯಕಾರಿ ಸದಸ್ಯ ರಾಜಕುಮಾರ ಉದನೂರ ನಿರೂಪಣೆ ಮಾಡಿದರು, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಸ್ವಾಗತಿಸಿದರು, ಉಪಾಧ್ಯಕ್ಷ ಅರುಣಕುಮಾರ ಕದಂ ವಂದಿಸಿದರು.

Leave a Reply

Your email address will not be published. Required fields are marked *