ಮಂತ್ರಾಲಯ ಗುರು ಶ್ರೀರಾಘವೇಂದ್ರ ಸ್ವಾಮಿಗಳಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಈಗಾಗಲೇ ರಾಯರ ಕುರಿತು ಅನೇಕ ಭಕ್ತಿಗೀತೆಗಳು ಬಂದಿವೆ. ಈಗ ಹೊಸದೊಂದು ಭಕ್ತಿಗೀತೆ ರಚನೆಗೆ ತಯಾರಿ ನಡೆದಿದೆ. ‘ರಾಯರ ದರ್ಶನ’ ಆಲ್ಭಂ ಮೂಲಕ ಈ ಗೀತೆ ಬರಲಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಅಡಿಯಲ್ಲಿ ಸುಗುಣ ರಘು ಅಲ್ಭಂ ನಿರ್ಮಾಣ ಮಾಡುತ್ತಿದ್ದಾರೆ. ರಘು ಭಟ್ ಇದರ ಉಸ್ತುವಾರಿ ವಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಘು ಭಟ್ ಮಾತನಾಡಿ, ‘ರಾಯರ ದರ್ಶನ ಆಲ್ಬಂ ಸಾಂಗ್ ನಿರ್ಮಾಣ ಆಗುತ್ತಿದೆ. ಈವರೆಗೂ ಯಾರು ಹೇಳಿರದ ಹಾಗೂ ನೋಡಿರದ ರಾಯರ ಕುರಿತಾದ ಕೆಲವು ವಿಷಯ ಈ ಆಲ್ಬಂ ಹಾಡಿನಲ್ಲಿ ಇರಲಿದೆ. ಡಿಸೆಂಬರ್ 23 ರಿಂದ 7 ದಿನಗಳ ಕಾಲ ಮಂತ್ರಾಲಯದಲ್ಲಿ ಚಿತ್ರೀಕರಣಕ್ಕಾಗಿ ಶ್ರೀಗಳು ಸಮಯ ನೀಡಿದ್ದಾರೆ. ರಾಯರ ಭಕ್ತರಾದ ಅನೇಕ ಸೆಲೆಬ್ರಿಟಿಗಳು ಈ ಆಲ್ಬಂ ಹಾಡಿನಲ್ಲಿ ಅಭಿನಯಿಸಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಆರ್ ಬಾಬಿ ಮತ್ತು ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಲಿದ್ದಾರೆ ಎಂದರು.
ಫೆಬ್ರವರಿಯಲ್ಲಿ ಮಂತ್ರಾಲಯದಲ್ಲೇ ಅದ್ದೂರಿಯಾಗಿ ಆಲ್ಬಂ ಸಾಂಗ್ ಬಿಡುಗಡೆ ಆಗಲಿದೆ ಎಂದರು.
ನಟ ಜಗ್ಗೇಶ್ ಮಾತನಾಡಿ, ‘ನಾನು ದೆಹಲಿಯಲ್ಲಿದ್ದೆ, ಶ್ರೀಗಳು ಫೋನ್ ಮಾಡಿ ಈ ಪತ್ರಿಕಾಗೋಷ್ಠಿಗೆ ಹೋಗಲು ಆದೇಶಿಸಿದ್ದರು. ರಾಯರ ಕೆಲಸವನ್ನು ಆಗಲ್ಲ ಎನ್ನುವ ಮಾತೆ ಇಲ್ಲ. ಏಕೆಂದರೆ ನನ್ನ ಉಸಿರೆ ರಾಯರು’ ಎನ್ನುತ್ತಾ ಭಾವುಕರಾದರು.
ತಮಗೆ ರಾಯರ ಮೇಲೆ ಭಕ್ತಿ ಬರಲು ತಾಯಿ ಕಾರಣ ಎಂದು ಜಗ್ಗೇಶ್ ಹೇಳಿದರು. ‘ನಮ್ಮ ತಾಯಿ 500 ರೂ ಕೊಟ್ಟು ನನ್ನನ್ನು ಮೊದಲ ಬಾರಿಗೆ ಮಂತ್ರಾಲಯಕ್ಕೆ ಕಳಿಸಿದರು. ರಾಯರಿದ್ದಾರೆ ಎಂದು ಮನದಲ್ಲಿ ಬಿತ್ತಿದ್ದರು. ಆನಂತರ ನನ್ನ ಜೀವನದಲ್ಲಿ ಆಗಿರುವುದೆಲ್ಲ ರಾಯರ ಕರುಣೆ’ ಎಂದರು.
ರಾಯರ ಮಠದ ಮುಂದೆ ಇರುವಾಗಲೆ ‘ರಾಯರ ದರ್ಶನ’ ಹಾಡು ಬರೆಯಲು ರಘು ಭಟ್ ಅವರಿಂದ ಕರೆ ಬಂದ ವಿಷಯವನ್ನು ಗೀತರಚನೆಕಾರ ನಾಗಾರ್ಜುನ ಶರ್ಮ ತಿಳಿಸಿದರು.
ಮಂತ್ರಾಲಯದಿಂದ ಆಗಮಿಸಿದ್ದ ಶ್ರೀನಿಧಿ ಕರಣಂ ಅವರು ಶ್ರೀಗುರು ರಾಯರ ಮತ್ತು ಶ್ರೀ ಸುಬುಧೇಂದ್ರ ತೀರ್ಥರ ಕರುಣೆಯನ್ನು ನೆನೆದು ಭಾವುಕರಾದರು. ರಘು ಭಟ್ ಅವರ ಈ ಪ್ರಯತ್ನಕ್ಕೆ ಶ್ರೀಗಳ ಸಂಪೂರ್ಣ ಅನುಗ್ರಹವಿದೆ ಎಂದರು.
ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು, ಗೀತರಚನೆಕಾರ ನಾಗಾರ್ಜುನ ಶರ್ಮಾ ಮತ್ತು ಅನೇಕರು ಪಾಲ್ಗೊಂಡಿದ್ದರು.