ಕಲಬುರಗಿ: ರಾಜ್ಯ ಸರ್ಕಾರಿ ನೌಕರರಿಗೆ 1 ಜುಲೈ 2025 ರಿಂದ ಅನ್ವಯವಾಗುವಂತೆ ಶೇ.2 ರಷ್ಟು ತುಟ್ಟಿ ಭತ್ಯೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಆರ್ಥಿಕ ಇಲಾಖೆ (ಸೇವೆಗಳು-2) ಸರ್ಕಾರದ ಜಂಟಿ ಕಾರ್ಯದರ್ಶಿ ಉಮಾ ಕೆ ಅವರು ಅಕ್ಟೋಬರ್ 15ರಂದು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಸದ್ಯ 12.25ರಷ್ಟು ತುಟ್ಟಿ ಭತ್ಯೆಯನ್ನು ಅವರ ಮೂಲ ವೇತನಕ್ಕೆ ಪಡೆಯುತ್ತಿದ್ದು ಈಗ ಮಂಜೂರು ಮಾಡಿರುವ ಶೇ.2 ರಷ್ಟು ತುಟ್ಟಿ ಭತ್ಯೆಯಿಂದ ಶೇ.14.25 ಕ್ಕೆ ಹೆಚ್ಚಳವಾಗಿದೆ. ಸದ್ಯ ಮಂಜೂರು ಮಾಡಿರುವ ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ಪಾವತಿ ಮಾಡಲು ತಿಳಿಸಲಾಗಿದೆ. ಅಷ್ಟೇ ಅಲ್ಲ ತುಟ್ಟಿ ಭತ್ಯೆ ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ಮಾಹೆಯ ವೇತನ ಬಟವಾಡೆಗೂ ಮುಂಚೆ ಪಾವತಿ ಮಾಡತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಈ ತುಟ್ಟಿಭತ್ಯೆ ಹೆಚ್ಚಳವು ನಿವೃತ್ತ ನೌಕರರಿಗೆ, ಕುಟುಂಬ ಪಿಂಚಣಿದಾರರಿಗೆ ಸೇರಿದಂತೆ ಮತ್ತಿತರ ನೌಕರರಿಗೆ ಅನ್ವಯವಾಗಲಿದೆ.
ಕಳೆದ ವಾರವಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ಶೇ.3 ರಷ್ಟು ತುಟ್ಟಿ ಭತ್ಯೆ ಮಂಜೂರು ಮಾಡಲಾಗಿತ್ತು. ರಾಜ್ಯ ಸರ್ಕಾರವೂ ಕೂಡ ನೌಕರರಿಗೆ ದೀಪಾವಳಿ ಹಬ್ಬಕ್ಕೂ ಮುಂಚೆ ತುಟ್ಟಿ ಭತ್ಯೆ ಮಂಜೂರು ಮಾಡಿ ದೀಪಾವಳಿ ಗಿಫ್ಟ್ ನೀಡಿದೆ. ಸಕಾಲದಲ್ಲಿ ತುಟ್ಟಿಭತ್ಯೆ ಮಂಜೂರು ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ತುಟ್ಟಿಭತ್ಯೆ ಬಿಡುಗಡೆ ಮಾಡುವಂತೆ ಕಾಳಜಿ ವಹಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರಿಗೆ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಮತ್ತು ಪದಾಧಿಕಾರಿಗಳಾದ ಮಹೇಶ ಹೂಗಾರ, ಶ್ರೀಮಂತ ಪಟ್ಟೆದಾರ, ಧರ್ಮರಾಯ ಜವಳಿ, ಸುರೇಶ ಶರ್ಮಾ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ, ಸುರೇಶ ವಗ್ಗೆ ರವರು ಧನ್ಯವಾದಗಳು ಸಲ್ಲಿಸಿದ್ದಾರೆ.