ಸುದ್ದಿ ಸಂಗ್ರಹ ಶಹಾಬಾದ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಉದ್ಯಮಿ ಶಿವಕುಮಾರ ಇಂಗಿನಶೆಟ್ಟಿ ಹೇಳಿದರು.
ನಗರದ ಲಕ್ಷ್ಮಿಗಂಜ ಬಡಾವಣೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯ ಸಭಾಗೃಹದಲ್ಲಿ ನಡೆದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ವಿಕಾಸ ಕೇಂದ್ರವು ಮಹಿಳೆಯರಿಗೆ ತುಂಬಾ ಉಪಯೋಗಿಯಾಗಿದ್ದು, ಎಲ್ಲರು ಉತ್ತಮ ರೀತಿಯಲ್ಲಿ ಸಮಾಜದಲ್ಲಿ ಸ್ವಾವಲಂಬಿಯಾಗಿ ಬೆಳೆಯಬೇಕು ಎಂದರು.
ಧರ್ಮಸ್ಥಳ ಜನಜಾಗೃತಿ ವೇದಿಕೆಯ ಸದಸ್ಯ ವಾಸುದೇವ ಚವ್ಹಾಣ್ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿ ಪರಿಸರ ಸ್ವಚ್ಛತೆ, ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯಪಾನ ವರ್ಜನ ಶಿಬಿರ, ಪರಿಸರ ಕಾಳಜಿ, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಬಡವರಿಗೆ ಆರ್ಥಿಕ ಸಹಾಯ, ವೃದ್ಧರಿಗೆ ವಾತ್ಸಲ್ಯ ಮನೆ, ಪಿಂಚಣಿ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದ ಜನರಿಗೆ ಗ್ರಾಮಾಭಿವೃದ್ಧಿ ಯೋಜನೆ ಸಂಜೀವಿನಿಯಾಗಿದೆ ಎಂದರು.
ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಅರ್ಚನಾ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಜ್ಞಾನ ವಿಕಾಸ ಕೇಂದ್ರ ಪ್ರಾರಂಭಿಸಿ ಮಹಿಳೆಯರ ಆರ್ಥಿಕ, ಬೌದ್ಧಿಕ, ಸಾಮಾಜಿಕ, ಬಡತನ ದೂರ ಮಾಡುವ ದೃಷ್ಟಿಯಿಂದ ಜ್ಞಾನ ವಿಕಾಸ ಕೇಂದ್ರ ತೆರೆಯಲಾಗಿದೆ, ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ನೆರವು ನೀಡಿ ನಿರಂತರ ಬದಲಾವಣೆಗೆ ಪ್ರಯತ್ನಿಸಿ ಸ್ವಾವಲಂಬಿಯಾಗಿ ಮಾಡುತ್ತಿದೆ. ಮಹಿಳೆಯರು ತಮ್ಮ ಕುಟುಂಬವನ್ನು ಬಲಿಷ್ಠವಾಗಿ ಮಾಡುವುದಕ್ಕೆ ತರಬೇತಿ ನೀಡಿ ಅವರಿಗೆ ಹೊಸ ಹೊಸ ಕೌಶಲ್ಯವನ್ನು ಕಲಿಸಲಾಗುತ್ತದೆ ಎಂದರು.
ವಲಯ ಮೇಲ್ವಿಚಾರಕ ವಿಕಾಸ, ಸುಧಾರಾಣಿ ಚವ್ಹಾಣ, ಎನ್.ಸಿ ಇಂಗಿನಶೆಟ್ಟಿ ಶಾಲೆಯ ಮುಖ್ಯಗುರು ಸವಿತಾ ಬೆಳಗುಂಪಿ, ಪಾರ್ವತಿ ಚಟ್ಟಿ, ಕೇಂದ್ರದ ಅಧ್ಯಕ್ಷೆ ಸುಮಂಗಲಾ ಹಳ್ಳಿ, ಸೇವಾ ಪ್ರತಿನಿಧಿ ಶಶಿಕಲಾ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಹಿಳೆಯವರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಅನಿತಾ ನಿರೂಪಿಸಿದರು, ಬಿಂದು ಕೋಬಾಳ ಸ್ವಾಗತಿಸಿದರು ಮತ್ತು ಪ್ರಭಾವತಿ ವಂದಿಸಿದರು.