ನವದೆಹಲಿ: 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದ್ದು, ಮಾರಿಯಾ ಕೊರಿನಾ ಮಚಾದೋ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೆನೆಜುವೆಲಾದ ಜನರ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಮತ್ತು ಶಾಂತಿಗಾಗಿ ನಡೆಸಿದ ಹೋರಾಟಕ್ಕಾಗಿ ಮಾರಿಯಾ ಕೊರಿನಾ ಮಚಾದೋ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ತಿಳಿಸಿದೆ.
ಈ ಕುರಿತು ಎಕ್ಸ್ ಪೋಸ್ಟ್‌ನಲ್ಲಿ ಹರ್ಷ ವ್ಯಕ್ತಪಡಿಸಿರುವ ಮಚಾದೋ, ನೊಬೆಲ್ ಶಾಂತಿ ಪಾರಿತೋಷಕವು ಎಲ್ಲಾ ವೆನೆಜುವೆಲಾ ಜನರ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ. ಈ ಪುರಸ್ಕಾರವನ್ನು ವೆನೆಜುವೆಲಾದ ದುಃಖಿತ ಜನರು ಹಾಗೂ ಪ್ರಜಾಪ್ರಭುತ್ವಪರ ಚಳವಳಿಗೆ ನಿರ್ಣಾಯಕ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.
ನನ್ನ ಎಲ್ಲಾ ವೆನೆಜುವೆಲಾ ಜನರ ಹೋರಾಟಕ್ಕೆ ಇದೊಂದು ಮನ್ನಣೆ ಸಿಕ್ಕಂತಾಗಿದೆ. ಜೊತೆಗೆ ನಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಮತ್ತು ಸ್ವಾತಂತ್ರ್ಯ ಪಡೆಯಲು ಉತ್ತೇಜನ ಸಿಕ್ಕಂತಾಗಿದೆ. ನಾವಿಂದು ವಿಜಯದ ಹೊಸ್ತಿಲಲ್ಲಿದ್ದೆವೆ. ಎಂದಿಗಿಂತಲೂ ಹೆಚ್ಚಾಗಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸಾಧಿಸಲು ನಮ್ಮ ಪ್ರಮುಖ ಮಿತ್ರರಾಷ್ಟ್ರಗಳಾಗಿ ಅಧ್ಯಕ್ಷ ಟ್ರಂಪ್, ಯುನೈಟೆಡ್ ಸ್ಟೇಟ್ಸ್‌ನ ಜನರು, ಲ್ಯಾಟಿನ್ ಅಮೆರಿಕದ ಜನರು ಮತ್ತು ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ನಾವು ನಂಬುತ್ತೆವೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನೊಬೆಲ್ ಸಮಿತಿ ಪ್ರಶಸ್ತಿ ಕೊಟ್ಟಿದ್ದೆಕೆ ?
ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಮರಳಿ ಪಡೆಯಲು, ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಗಾಗಿ ಹೋರಾಟ ನಡೆಸಿದ್ದಾಗಿ ಮಾರಿಯಾ ಕೊರಿನಾ ಮಚಾದೋ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಹೇಳಿದೆ.
ಯಾರು ಈ ಮರಿಯಾ ಕೊರಿನಾ ಮಚಾದೊ ?
- ಸದ್ಯ ವಿರೋಧ ಪಕ್ಷದ ನಾಯಕಿಯೂ ಆಗಿರುವ ಮಚಾದೋ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
- ಮಡುರೊ ಅವರ ಸರ್ವಾಧಿಕಾರಿ ಆಡಳಿತವನ್ನು ಧಿಕ್ಕರಿಸಿ ಹೋರಾಟ ನಡೆಸಿದರು.
- ಅವರು ಬೆದರಿಕೆಗಳನ್ನು ಎದುರಿಸಿದ್ದಲ್ಲದೆ, ಬಂಧನಕ್ಕೊಳಗಾಗಿದ್ದಾರೆ. ಪ್ರಯಾಣ ನಿಷೇಧ ಮತ್ತು ರಾಜಕೀಯ ಕಿರುಕುಳ ಎದುರಿಸಿದ್ದಾರೆ.
- ಅಪಾಯಗಳ ಹೊರತಾಗಿಯೂ, ವೆನೆಜುವೆಲಾದಲ್ಲಿಯೇ ಉಳಿದರು. ಅವರಿಗೆ ‘ಐರನ್ ಲೇಡಿ’ ಎಂದು ಕರೆಯಲಾಗುತ್ತದೆ.
- ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಮಚಾದೋ ಅವರ ಪಾತ್ರ ಗಣನೀಯ.
- ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರ್ಷದ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
- ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವ ಹೋರಾಟಕ್ಕಾಗಿ ಅವರನ್ನು ಗುರುತಿಸಲಾಗಿದೆ.
- ಬೆಳೆಯುತ್ತಿರುವ ಕತ್ತಲೆಯ ಸಮಯದಲ್ಲಿ ಪ್ರಜಾಪ್ರಭುತ್ವದ ಜ್ವಾಲೆಯನ್ನು ಉರಿಯುವಂತೆ ಮಾಡುವ ಶಾಂತಿಯ ಧೈರ್ಯಶಾಲಿ ಮತ್ತು ಬದ್ಧತೆಯ ಪ್ರತಿಪಾದಕಿ ಮಚಾದೋ ಎಂದು ಆಯ್ಕೆ ಸಮಿತಿಯು ಶ್ಲಾಘಿಸಿದೆ.