ತಿರುಮಲ: ತಿರುಪತಿ ದೇಶದ ಅತ್ಯಂತ ಶ್ರೀಮಂತ, ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಒಂದು ತಿರುಪತಿ ತಿಮ್ಮಪ್ಪನಿಗೆ ದುಡ್ಡು ನೀಡಿದಷ್ಟು ದುಪ್ಪಟ್ಟು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಹಿಂದು ಸಮುದಾಯದ ಭಕ್ತರಿಗೆ ಇರುವುದರಿಂದ ಭಕ್ತರು ಸಾಕಷ್ಟು ವಸ್ತುಗಳನ್ನು ತಿಮ್ಮಪ್ಪನಿಗೆ ದಾನ ಮಾಡುತ್ತಾರೆ.
ದಿನವೂ ಇಲ್ಲಿನ ದೇಗುಲಕ್ಕೆ 60 ಸಾವಿರದಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಬರುತ್ತಾರೆ. ಲಕ್ಷಾಂತರ ಮೊತ್ತದ ಹಣವನ್ನು ಇಲ್ಲಿನ ಹುಂಡಿಗಳಿಗೆ ಹಾಕಿ ತೆರಳುತ್ತಾರೆ. ಬರಿ ಹಣ ಮಾತ್ರವಲ್ಲದೆ, ಚಿನ್ನ, ಬೆಳ್ಳಿ, ಆಭರಣಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಕೂಡ ಇಲ್ಲಿ ಭಕ್ತರು ದಾನ ಮಾಡುತ್ತಾರೆ. ಆದರೆ ಇಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 20 ವರ್ಷಗಳಲ್ಲಿ 1,000 ಕೋಟಿ ಆಸ್ತಿ ಮಾಡಿದ್ದು, ಅವರ ಆಸ್ತಿಯ ಮೂಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ.
20ರ ಹರೆಯದಲ್ಲಿ ಕ್ಲಾರ್ಕ್ ಆಗಿ ತಿರುಪತಿ ದೇವಾಲಯದ ಪೆದ್ದ ಜೀಯಾನಗರ ಮಠಕ್ಕೆ ಸೇರಿದ ರವಿಕುಮಾರ್ ಅವರು ಅಲ್ಲಿನ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಕೆಲಸವಾದ ಹುಂಡಿ ಹಣವನ್ನು ಲೆಕ್ಕ ಮಾಡುವ ಕ್ಲಾರ್ಕ್ ಆಗಿ ಕೆಲಸಕ್ಕೆ ಸೇರಿದ್ದು, ದಿನಕ್ಕೆ 4 ರಿಂದ 16 ಕೋಟಿಗಳ ವರೆಗೂ ಬರುತ್ತಿದ್ದ ಹಣವನ್ನು ಇಲ್ಲಿ ಲೆಕ್ಕ ಮಾಡಲಾಗುತ್ತದೆ. ಸುಮಾರು 3 ದಶಕಗಳವರೆಗೆ ಅಂದರೆ 2023ರ ಏಪ್ರಿಲ್ 29ರವರೆಗೆ ಆತ ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿಯಾಗಿಯೇ ಅಲ್ಲಿ ಜನಪ್ರಿಯತೆ ಪಡೆದಿದ್ದರು. ಆದರೆ 2023ರ ಏಪ್ರಿಲ್ನಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಸಿಸಿಟಿವಿಯ ದೃಶ್ಯಾವಳಿ ತಪಾಸಣೆ ಮಾಡಿದಾಗ ರವಿಕುಮಾರ್ ಅವರ ನಿಜವಾದ ಮುಖ ಬೆಳಕಿಗೆ ಬಂದಿತ್ತು.
108 ಕ್ಯಾಮೆರಾಗಳಿದ್ದ ದೇವಾಲಯದ ದೇಣಿಗೆಗಳು ಹೊಂದಿರುವ 22,000 ಚದರ ಅಡಿ ವಿಸ್ತೀರ್ಣದ ಹೊಸದಾದ ಪರಕಮಣಿ ಸಂಕೀರ್ಣದಲ್ಲಿ ರವಿಕುಮಾರ್ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ಆ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ನಂತರ ಸಿಸಿಟಿವಿಗಳನ್ನು ಮತ್ತಷ್ಟು ಪರಿಶೀಲಿಸಿದಾಗ ಅವರು 100 ಯುಎಸ್ ಡಾಲರ್ನಷ್ಟು ಬಿಲ್ಗಳನ್ನು ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಬರಿ ಇಷ್ಟೇ ಅಲ್ಲದೆ, ಈ ಬಗ್ಗೆ ವಿಚಾರಿಸಿದಾಗ ರವಿಕುಮಾರ್ 20 ವರ್ಷಕ್ಕೂ ಹೆಚ್ಚು ಕಾಲ ದೇವಸ್ಥಾನದಿಂದ ಕಳ್ಳತನ ಮಾಡುತ್ತಿದ್ದೆನೆ ಎಂದು ಒಪ್ಪಿಕೊಂಡು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದ್ದರು.
ಹುಂಡಿಯಿಂದ ಹಣ ಕದ್ದು ಆಸ್ತಿ ಖರೀದಿ: 7 ಆಸ್ತಿಗಳನ್ನು ತಿರುಪತಿಗೆ ದಾನ ನೀಡಿದ ದಂಪತಿ
ಕದ್ದ ಹಣದಿಂದ ರವಿಕುಮಾರ್ ತಿರುಪತಿ, ಚೆನ್ನೈ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದ. 14 ಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಲಾಗಿತ್ತು ಎಂದು ಹೇಳಿದ್ದ. ಆದರೆ ತಪ್ಪೊಪ್ಪಿಕೊಂಡ ನಂತರ ಊಹಿಸಲಾಗದಷ್ಟು ತಿರುವು ಪಡೆದುಕೊಂಡಿತ್ತು. 2023ರ ಮೇ 19ರಂದು ರವಿಕುಮಾರ್ ಮತ್ತು ಆತನ ಪತ್ನಿ ಒಟ್ಟು 7 ಆಸ್ತಿಗಳು ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್ಗೆ ದಾನವಾಗಿ ನೀಡಿದ್ದರು. ಇವುಗಳಲ್ಲಿ 5 ಆಸ್ತಿ ತಿರುಪತಿಯಲ್ಲಿ ಮತ್ತು ಎರಡು ಆಸ್ತಿ ಚೆನ್ನೈನಲ್ಲಿದ್ದವು. ಈ ಆಸ್ತಿಗಳನ್ನು ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದಾಗಿ ದಾನ ಮಾಡುತ್ತಿರುವುದಾಗಿ ದಂಪತಿ ಹೇಳಿಕೊಂಡಿದ್ದರು.
ಲೋಕ ಅದಾಲತ್ನಲ್ಲಿ ರಾಜಿ, ಪ್ರಕರಣ ಖುಲಾಸೆ
ಟಿಟಿಡಿ ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ ಈ ದೇಣಿಗೆ ಪಡೆದುಕೊಳ್ಳುವುದಕ್ಕೆ ಅನುಮೋದನೆ ನೀಡಿದ್ದರು. ಆದರೆ ಮೇ 30ರ ಹೊತ್ತಿಗೆ ತಿರುಮಲ ಪೊಲೀಸರು ರವಿಕುಮಾರ್ ದಂಪತಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದರು, ಆದರೆ ಕೆಲವೇ ತಿಂಗಳುಗಳ ನಂತರ ಸೆ.9 ರಂದು ರವಿಕುಮಾರ್ ಮತ್ತು ದೂರುದಾರ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ ಸತೀಶಕುಮಾರ್ ರಾಜಿ ಮಾಡಿಕೊಳ್ಳಲು ಲೋಕ ಅದಾಲತ್ ಸಂಪರ್ಕಿಸಿದರು. ಹೀಗಾಗಿ ಈ ಪ್ರಕರಣವನ್ನು ಇತ್ಯರ್ಥಪಡಿಸಿ ರವಿಕುಮಾರ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು, ಒಂದು ರಾತ್ರಿಯೂ ಅವರು ಜೈಲಿನಲ್ಲಿ ಕಳೆಯಲಿಲ್ಲ.
ವೈಎಸ್ಆರ್ ಸರ್ಕಾರ ಬರ್ತಿದಂತೆ ಮರು ವಿಚಾರಣೆಗೆ ಪ್ರಕರಣ
2024ರಲ್ಲಿ ಆಂಧ್ರಪ್ರದೇಶಲ್ಲಿ ವೈಎಸ್ಆರ್ ಸರ್ಕಾರ ಬದಲಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಟಿಡಿ ಸರ್ಕಾರ ಬಂತೋ ಆವಾಗ ಎಲ್ಲವೂ ಬದಲಾಯ್ತು. ಇದೆ ಸಮಯದಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣವೂ ಬೆಳಕಿಗೆ ಬಂದಿದ್ದು ನಿಮಗೆ ನೆನಪಿರಬಹುದು. ದೇವಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಂತರಿಕ ವಿಚಾರಣೆ ನಡೆಯಿತು. ಈ ವೇಳೆ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ ಸತೀಶಕುಮಾರ್ ಪೊಲೀಸರ ತೀವ್ರ ಒತ್ತಡದ ಕಾರಣಕ್ಕೆ ರಾಜಿಗೆ ಒಪ್ಪಿದ್ದಾಗಿ ಹೇಳಿಕೊಂಡಿದ್ದರು.
ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ರಿಟ್ ಅರ್ಜಿ, ಅ.13ಕ್ಕೆ ವಿಚಾರಣೆ
ತಿರುಪತಿ ಪತ್ರಕರ್ತ ಎಂ. ಶ್ರೀನಿವಾಸರಾವ್ ಅವರು ಲೋಕ ಅದಾಲತ್ ನಿರ್ಧಾರವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಹೀಗಾಗಿ ಸೆ.19, 2025 ರಂದು ಹೈಕೋರ್ಟ್ ಲೋಕ ಅದಾಲತ್ ಆದೇಶವನ್ನು ರದ್ದುಗೊಳಿಸಿ, ಪ್ರಕರಣದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಿಐಡಿಗೆ ನಿರ್ದೇಶಿಸಿತು. ಈ ಪ್ರಕರಣದ ಮುಂದಿನ ವಿಚಾರಣೆ ಅ.13ಕ್ಕೆ ನಿಗದಿಪಡಿಸಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದ ಟಿಟಿಡಿ ಅಧಿಕಾರಿಗಳು ಹಿಂದಿನ ರಾಜಿಯನ್ನು ಸಮರ್ಥಿಸಿಕೊಂಡರು. ರವಿಕುಮಾರ್ ಅವರ ಕುಟುಂಬ ಸಾವಿನ ಅಂಚಿನಲ್ಲಿದೆ ಮತ್ತು ಆಸ್ತಿಗಳನ್ನು ದಾನ ಮಾಡಲು ಬಯಸಿದೆ ಎಂದು ಹೇಳಿದರು. ಈ ಸಂದರ್ಭಗಳಲ್ಲಿ 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡುವುದು ಸಮರ್ಥನೀಯ ಎಂದು ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಹೇಳಿದರು.
ಪ್ರಸ್ತುತ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಮತ್ತು ಬಿಜೆಪಿ ಮಂಡಳಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು. ಆಳವಾದ ತನಿಖೆ ಏಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ರವಿಕುಮಾರ್ ಇನ್ನೂ ಏಳು ಹೆಚ್ಚುವರಿ ಆಸ್ತಿಗಳು, ಮರ್ಸಿಡಿಸ್ ಬೆಂಜ್ ಮತ್ತು ವೋಲ್ವೋ ಸೇರಿದಂತೆ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಎಂದರು. ಈ ಹಿಂದೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದೇವಾಲಯದ ಆಭರಣಗಳನ್ನು ಕದ್ದು ಸಿಕ್ಕಿಬಿದ್ದವರಿಗೆ ಮರಣದಂಡನೆ ವಿಧಿಸಲಾಗಿತ್ತು.
ತಿರುಪತಿಯ 13 ಹುಂಡಿಗಳು ಪ್ರತಿ ಎರಡು ಗಂಟೆಗಳಿಗೊಮ್ಮೆ ತುಂಬುತ್ತದೆ. ಇವುಗಳಲ್ಲಿ ನಾಣ್ಯಗಳಿಂದ ಹಿಡಿದು ವಿದೇಶಿ ಕರೆನ್ಸಿವರೆಗೆ ಇರುತ್ತದೆ. ಈ ದೇಣಿಗೆಗಳನ್ನು 250 ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡವು ಸೂಕ್ಷ್ಮವಾಗಿ ಎಣಿಸಿ ಪ್ರತ್ಯೇಕಗೊಳಿಸಿ ಬ್ಯಾಂಕುಗಳಿಗೆ ವರ್ಗಾಯಿಸುತ್ತದೆ. ಆದರೂ ಈ ವಿಸ್ತಾರವಾದ ವ್ಯವಸ್ಥೆಯ ಹೊರತಾಗಿಯೂ, ಒಬ್ಬ ವ್ಯಕ್ತಿ ದಶಕಗಳವರೆಗೆ ಇಲ್ಲಿನ ಹುಂಡಿಯಲ್ಲಿ ಕದ್ದು ಅದನ್ನು ಯಾರಿಗೂ ತಿಳಿಯದಂತೆ ಬಳಸಿಕೊಂಡಿದ್ದು ಪವಾಡವೆ ಸರಿ.