ಕಲಬುರಗಿ: ಪರಿಸರ ಸ್ವಚ್ಛತೆ ಕಾಪಾಡುವುದು, ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಮಾಲಿನ್ಯ ನಿಯಂತ್ರಿಸಿ ಪರಿಸರದ ಆರೋಗ್ಯ ಕಾಪಾಡುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಪರಿಸರ ಆರೋಗ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಸಕಲ ಜೀವರಾಶಿಗಳು ಉಳಿದು, ಸಮೃದ್ಧವಾಗಿ ಬೆಳವಣಿಗೆಯಾಗಬೇಕಾದರೆ ಪರಿಸರದ ಪಾತ್ರ ಪ್ರಮುಖವಾಗಿದೆ ಎಂದರು.
ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮಗಳು, ಸರ್ಕಾರ, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆ ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಕಾರ್ಯವಾಗಬೇಕು. ಎಲೆಕ್ಟ್ರಿಕ್ ವಾಹನಗಳ ಬಳಕಗೆ ಆದ್ಯತೆ, ವೈಯಕ್ತಿಕ ವಾಹನದ ಬದಲಿಗೆ ಸಾರ್ವಜನಿಕ ಸಾರಿಗೆ ಬಳಸುವುದು, ರಾಸಾಯನಿಕ ಬಳಕೆ ನಿಷೇಧಿಸುವುದು ಸೇರಿದಂತೆ ಇನ್ನಿತರರ ಕ್ರಮಗಳಿಂದ ಪರಿಸರ ಸಂರಕ್ಷಣೆಯಾಗಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ, ವನಮಹೋತ್ಸವ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಇ-ತಾಜ್ಯ ಪುನರ್ಬಳಕೆ, ಆಹಾರ ಪದಾರ್ಥ ಹಾಳಾಗದಂತೆ ಎಚ್ಚರವಹಿಸುವುದು, ಸಾವಯುವ ಬೇಸಾಯಕ್ಕೆ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಭಾಗ್ಯಶ್ರೀ ಮತ್ತು ವಿದ್ಯಾರ್ಥಿಗಳು ಇದ್ದರು.