ಜಲ ಸಂರಕ್ಷಣೆ, ಸೂಕ್ತ ನಿರ್ವಹಣೆ ಅಗತ್ಯ: ಎಚ್.ಬಿ ಪಾಟೀಲ್

ನಗರದ

ಕಲಬುರಗಿ: ಸಕಲ ಜೀವರಾಶಿಗಳಿಗೆ ಆಸರೆಯಾದ ಜಲವನ್ನು ಹಾಳು ಮಾಡದೆ, ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆ ಮಾಡಬೇಕು ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.

ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಜಲ ಮೇಲ್ವಿಚಾರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ನೀರಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸುವುದು, ಜಲ ಸಂರಕ್ಷಣೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುವ ಕಾರ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಬೇಕಾಗಿದೆ ಎಂದರು.

ನೀರಿನ ಗುಣಮಟ್ಟಕ್ಕೆ ಬದಲಾವಣೆ ನಿರ್ಣಯಿಸಲು ಮತ್ತು ಸವಾಲುಗಳನ್ನು ಗುರುತಿಸಲು, ಆ ಮೂಲಕ ಸುಸ್ಥಿರ ನೀರಿನ ನಿರ್ವಹಣೆ ಬೆಂಬಲಿಸಲು ಮತ್ತು ಎಲ್ಲರಿಗೂ ಶುದ್ಧ, ಸುರಕ್ಷಿತ ನೀರಿನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, ವಿಶ್ವ ನೀರಿನ ಮೇಲ್ವಿಚಾರಣೆಯು ನಿರ್ಣಾಯಕವಾಗಿದೆ. ಈ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು, ಸಾರ್ವಜನಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಯಮಗಳನ್ನು ಅನುಸರಿಸಲು ಅಗತ್ಯವಾದ ವಸ್ತುನಿಷ್ಠ ದತ್ತಾಂಶ ಒದಗಿಸುತ್ತದೆ. ಇದು ಪರಿಸರ ಉಸ್ತುವಾರಿ ಮತ್ತು ವಿಪತ್ತು ಸಿದ್ಧತೆಗೆ ಪ್ರಮುಖ ಸಾಧನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕ ಮಹಾದೇವಪ್ಪ ಎಚ್.ಬಿರಾದಾರ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *