ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವಾಗ ಯಾವ ಕಡೆ ಹೋಗಬೇಕು ಎನ್ನುವ ಬಗ್ಗೆ ದೇಶಿಯ ಸಂಸ್ಥಾನಗಳಿಗೆ ಮುಕ್ತ ಅವಕಾಶ ನೀಡಿರುವುದು ಹೈದರಾಬಾದ್ ಕರ್ನಾಟಕ ಭಾಗದವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ದೇಶ ಸ್ವಾತಂತ್ರ್ಯಗೊಂಡಾಗ ಸುಮಾರು 500 ದೇಶಿಯ ಸಂಸ್ಥಾನಗಳು ಇದ್ದವು. ಅದರಲ್ಲಿ ಹೈದರಾಬಾದ್ ಸಂಸ್ಥಾನವೂ ಒಂದು. 1774 ರಿಂದ 1948 ರವರೆಗೆ ಸುಮಾರು ಎರಡು ನೂರು ವರ್ಷಗಳ ಕಾಲ ಆಡಳಿತ ನಡೆಸಿದವರು. ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ 17 ಸೆಪ್ಟೆಂಬರ್ 1948 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗಟ್ಟಿ ಧೈರ್ಯ ನಮಗೆ ಸ್ವಾತಂತ್ರ್ಯ ತಂದುಕೊಟ್ಡಿತು ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, 13 ತಿಂಗಳ ಕಾಲ ನಡೆದ ಹೈದರಾಬಾದ್ ವಿಮೋಚನಾ ಚಳವಳಿ ಫಲವಾಗಿ ನಿಜಾಮನಿಂದ ವಿಮುಕ್ತಿ ಸಿಕ್ಕಿತ್ತು ಎಂದರು.
ರಜಾಕಾರರ ಅತಿಯಾದ ಹಿಂಸೆ, ಕಠಿಣ ಕಾನೂನುಗಳು ವಿಮೋಚನಾ ಹೋರಾಟಕ್ಕೆ ನಾಂದಿಯಾದವು. ಸಾಮಾನ್ಯ ಜನರಿಗೆ ಅಮಾನವೀಯ ಹಾಗೂ ಅಪಮಾನ ಮಾಡುವ ಕರಗಳು ಇದ್ದವು. ನಬಾಬನನ್ನು ಭೇಟಿಯಾಗಲು ಬಯಸುವ ಪ್ರತಿಯೊಬ್ಬರು ‘ನಜರಾನಾ‘ ಕರ ಕೊಡಬೇಕಿತ್ತು. ಇದು ಕೂಡ ಜನರಲ್ಲಿ ಹೈದರಾಬಾದ್ ಪ್ರಾಂತದಿಂದ ಮುಕ್ತಿ ಪಡೆಯಲು ಪ್ರೇರಣೆಯಾದ ಅಂಶಗಳಲ್ಲಿ ಒಂದು ಎಂದರು.
ವಿಮೋಚನಾ ಹೋರಾಟ ಕೇವಲ ನವಾಬರ ಹಾವಳಿ ವಿರುದ್ಧದ ಆಕ್ರೋಶವಷ್ಟೇ ಆಗಿರಲಿಲ್ಲ. ಸಂಪೂರ್ಣ ನೆಲಕಚ್ಚಿದ್ದ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ಬದುಕು, ಆರ್ಥಿಕ ಶಕ್ತಿಯ ಅಭಿವೃದ್ಧಿಯ ದ್ಯೋತಕವೂ ಆಗಿತ್ತು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜಿರೋಳ್ಳಿ, ಅರ್ಜುನ ಕಾಳೆಕರ, ಶಿವಶಂಕರ ಕಾಶೆಟ್ಟಿ, ಜಯದೇವ ಜೋಗಿಕಲಮಠ, ಪ್ರಕಾಶ ಪುಜಾರಿ, ಕಿಶನ್ ಜಾಧವ್, ಭೀಮರಾಯ ಸುಬೇದಾರ, ಮಲ್ಲಿಕಾರ್ಜುನ ಸಾತಖೇಡ, ಅಯ್ಯಣ್ಣ ದಂಡೋತಿ, ಬಿಕೆ ಕಾಳಪ್ಪ, ಅಶೋಕ ಪಂಚಾಳ, ಕುಮಾರ ದಾಸ, ದೇವೀಂದ್ರ ಬಡಿಗೇರ, ಕಾಳಪ್ಪ ಸೂಲಹಳ್ಳಿ, ದತ್ತಾ ಖೈರೆ, ರವಿ ಜಾಧವ ಸೇರಿದಂತೆ ಇತರರು ಇದ್ದರು.