ಚಿಕ್ಕಮಗಳೂರಿನ 10 ಸಾವಿರ ಎಕರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಡ್ರಿಲ್ಲಿಂಗ್ ಗಾಗಿ ಕೇಂದ್ರ ಸರ್ಕಾರದ ಮೊರೆ ಹೋದ ಬೆಂಗಳೂರು ಕಂಪನಿ

ಸುದ್ದಿ ಸಂಗ್ರಹ ವಿಶೇಷ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ ಆ 10,100 ಎಕರೆಯಲ್ಲಿ ಕನಿಷ್ಟ 1,000 ಕಡೆಗಳಲ್ಲಿ ಡ್ರಿಲ್ಲಿಂಗ್ ಅಥವಾ ಬೋರ್​ವೆಲ್​ ಕೊರೆಯಿಸಬೇಕಿದ್ದು ಅದಕ್ಕಾಗಿ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ. ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದರೆ, ಕೋಲಾರದ ಕೆಜಿಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ನಂತರ ರಾಜ್ಯದಲ್ಲಿ ಮತ್ತೊಂದು ದೊಡ್ಡ ಚಿನ್ನದ ಗಣಿಗಾರಿಕೆಗೆ ಶ್ರೀಕಾರ ಹಾಕಿದಂತಾಗುತ್ತದೆ.

ಕೃಷಿ – ಅರಣ್ಯ ಭೂಮಿ
ತಾನು ಗುರುತಿಸಿರುವ 10,100 ಎಕರೆ ಜಾಗದಲ್ಲಿ 5,600 ಎಕರೆ ಜಾಗವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆ ಇಡಿ 10,100 ಎಕರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಮೇಲ್ನೋಟಕ್ಕೆ ಹಲವಾರು ಆಧಾರಗಳು ಸಿಕ್ಕಿದ್ದು, ಅದನ್ನು ನಿಖರವಾಗಿ ತಿಳಿಯಲು ತಮಗೆ ಡ್ರಿಲ್ಲಿಂಗ್’ಗೆ ಅವಕಾಶ ಕಲ್ಪಿಸಬೇಕು ಎಂದು ಕಂಪನಿ ಕೋರಿದೆ. ಆದರೆ ಕೇಂದ್ರ ಪರಿಸರ ಇಲಾಖೆ ಆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ ತಿಳಿಸಿದೆ.

ಯಾವುದು ಆ ಕಂಪನಿ ? ಪತ್ರದಲ್ಲಿ ಏನಿದೆ ?
ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಬೆಂಗಳೂರು ಮೂಲದ ಕಂಪನಿಯ ಹೆಸರು ಔರಮ್ ಜಿಯೋ ಎಕ್ಸ್ ಪ್ಲೋರೇಷನ್ ಪ್ರೈವೇಟ್ ಲಿಮಿಟೆಡ್. ಈ ಕಂಪನಿಗೆ ಕೇಂದ್ರ ಖನಿಜ ಇಲಾಖೆಯಿಂದ ನಿಕ್ಷೇಪಗಳಿಗಾಗಿ ಭೂಮಿಯ ಪರೀಕ್ಷೆ ನಡೆಸಲು ಹಾಗೂ ಅಗತ್ಯವಿದ್ದ ಕಡೆ ಸಣ್ಣ ಪ್ರಮಾಣದ ಉತ್ಖನನ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಕಂಪನಿ ಹೇಳುವುದೆನೆಂದರೆ, ತರೀಕೆರೆಯ ಸುಮಾರು 10,100 ಎಕರೆ ಭೂಭಾಗದಲ್ಲಿ ಚಿನ್ನದ ನಿಕ್ಷೇಪವಿದೆ. ಆ ಬಗ್ಗೆ ಮತ್ತಷ್ಟು ನಿಖರವಾಗಿ ಸಂಶೋಧನೆ ನಡೆಸುವ ಅವಶ್ಯಕತೆಯಿದೆ. ಆ 10,100 ಎಕರೆ ಭೂಭಾಗದಲ್ಲಿ 5,600 ಎಕರೆ ಭೂಮಿಯು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಉಳಿದ ಭೂಮಿಯಲ್ಲಿ 3,600 ಎಕರೆ ಪಪ್ರದೇಶವು ಕೃಷಿ ಭೂಮಿ. ಈ ಭೂಮಿಯು ಕಲ್ಲು ಬಂಡೆಗಳನ್ನು ಹೊಂದಿರುವುದರಿಂದ ಇಲ್ಲಿ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾವು ಈ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಬೇಕಿದೆ. ಆ ಹಿನ್ನೆಲೆಯಲ್ಲಿ ನಮಗೆ 10,000 ಎಕರೆ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕಂಪನಿಯು ವಿವರಿಸಿದೆ.

ಕಂಪನಿಯು ಹಿಂದಿನ ಪರೀಕ್ಷೆಗಳು ಯಶಸ್ವಿ
ಇತ್ತೀಚೆಗೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳಿರುವ ಬಗ್ಗೆ ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿಂದೆ ಇದೆ ಕಂಪನಿ ಕರ್ನಾಟಕದ ಸಿಂಗನಮನೆ, ತಂಬಡಿಹಳ್ಳಿ, ಗೋಣಿಬಿಡ್ಡು ಮತ್ತು ಹೊನ್ನುಹಟ್ಟಿಗಳಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಗುರುತು ಮಾಡಿತ್ತು. ಅಲ್ಲಿನ ಪ್ರತಿ ಟನ್ ಮಣ್ಣಿನಲ್ಲಿ 19ರಿಂದ 80 ಗ್ರಾಂ. ಚಿನ್ನ ಸಿಗುತ್ತದೆ ಎಂದು ಹೇಳಿತ್ತು. ಅವೆಲ್ಲವೂ ದೃಢಪಟ್ಟಿವೆ ಎಂದು ಈಗ ಸರ್ಕಾರಕ್ಕೆ ಬರೆದಿರುವ ಪತ್ರದ ಜೊತೆಗೆ ಕಂಪನಿಯು ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಈಗ ತರೀಕೆರೆಯಲ್ಲಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರೆ 10,100 ಎಕರೆ ಭೂಭಾಗದಲ್ಲಿ 1,000 ಕಡೆ ಬೋರ್​ವೆಲ್​ ಗಳನ್ನು ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪತ್ರದ ಮುಖೇನ ಔರಮ್ ಕಂಪನಿ ತಿಳಿಸಿದೆ.

ವನ್ಯಜೀವಿಗಳ ತಾಣ
ತರೀಕೆರೆ ಪ್ರಾಂತ್ಯದ ಅರಣ್ಯ ಭಾಗವು, ಪಶ್ಚಿಮ ಘಟ್ಟಗಳಿಗೆ ಸೇರಿದ್ದಾಗಿದೆ, ಅಲ್ಲಿ ಚಿರತೆಗಳು, ಕರಡಿಗಳು ಮತ್ತು ಅಪರೂಪದ ಅನೇಕ ಜೀವಿಗಳ ಆಶ್ರಯ ತಾಣವಾಗಿದೆ. ಅಷ್ಟೇ ಅಲ್ಲದೆ, ಪಶ್ಚಿಮ ಘಟ್ಟಗಳನ್ನು ನಾವು ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೆ ಹಾಳುಗೆಡವಿದ್ದೆವೆ. ಅದರಿಂದ ಅಲ್ಲಿ ಪರಿಸರ ನಾಶ, ಜೀವಿಗಳ ನಾಶಕ್ಕೂ ನಾಂದಿ ಹಾಡಿದ್ದೆವೆ. ಪಶ್ಚಿಮ ಘಟ್ಟಗಳ ಅನೇಕ ಕಡೆಗಳಲ್ಲಿ ಭೂಕುಸಿತ ಮುಂತಾದ ಅಪಾಯಗಳು ಸಂಭವಿಸುತ್ತಿವೆ. ಹೀಗಾಗಿ ಕಂಪನಿಯು ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *