ಚಿತ್ತಾಪುರ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ, ಪವಾಡ ಪುರುಷ, ಸಿದ್ಧಕುಲಚಕ್ರವರ್ತಿ, ಗುರುಕುಲಸಾರ್ವಭೌಮ ನಾಲವಾರದ ಮಹಾತ್ಮಾ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾ ಶಿವಯೋಗಿಗಳ ಜಾತ್ರಾಮಹೋತ್ಸವವು ಜ. 29 ಮತ್ತು 30 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ದಿಗ್ದರ್ಶನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹತ್ತು ಹಲವು ವೈಶಿಷ್ಟ್ಯಪೂರ್ಣ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜ.29 ರಂದು ಬುಧವಾರ ಮಧ್ಯರಾತ್ರಿ ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ಭಕ್ತರ ಹರಕೆಯ “ತನಾರತಿ” ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಮತ್ತು ಜ.30 ರಂದು ಗುರುವಾರ ಮಹಾಯೋಗಿಯ ಮಹಾರಥೋತ್ಸವ ನೆರವೆರಲಿದೆ.
ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಮಠವಾಗಿರುವ ಕಲಬುರಗಿ ಜಿಲ್ಲೆಯ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಸುಮಾರು 300 ವರ್ಷಗಳ ಭವ್ಯ-ದಿವ್ಯ ಪರಂಪರೆ ಹೊಂದಿರುವ ಧಾರ್ಮಿಕ ಜಾಗೃತ ತಾಣ. ನಂಬಿ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುವ ಮಹಾಶಕ್ತಿಯಾಗಿ ಮಹಾಯೋಗಿ ಕೋರಿಸಿದ್ಧೇಶ್ವರರು ನಾಲವಾರ ಶ್ರೀಕ್ಷೇತ್ರದಲ್ಲಿ ಜೀವಂತ ಸಮಾಧಿಸ್ಥರಾಗಿ ಭಕ್ತರ ಬಾಳು ಬೆಳಗುತ್ತಿದ್ದಾರೆ.
ನಾಲವಾರ ಶ್ರೀಮಠ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಪ್ರಥಮಗಳಿಗೆ ಕಾರಣವಾದ ವಿಶಿಷ್ಠ ನೆಲ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲ ಬಾರಿಗೆ 1990 ರಲ್ಲಿ ನೂರಾರು ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಮೂಲಕ ಮಠ ಸಮಾಜಮುಖಿಯಾಗಿಯೂ ಯೋಚಿಸಬಹುದು ಎಂದು ಸಾಬೀತುಪಡಿಸಿತು. ಕೇವಲ ದಕ್ಷಿಣ ಕರ್ನಾಟಕದ ಹಾಗೂ ಉತ್ತರದ ಕೆಲವೇ ಶ್ರೀಮಂತ ಮಠಗಳಲ್ಲಿ ನಡೆಯುತ್ತಿದ್ದ ಶಿವಾನುಭವ ಕಾರ್ಯಕ್ರಮ 1984 ರಲ್ಲಿ ನಾಲವಾರ ಶ್ರೀಮಠದಲ್ಲಿ ಪ್ರಾರಂಭಿಸಿ ಇಂದಿನವರೆಗೂ ಅನೂಚಾನವಾಗಿ ನಡೆಸಿಕೊಂಡು ಬಂದ ಶ್ರೇಯಸ್ಸು ನಾಲವಾರ ಶ್ರೀಮಠದ್ದು. 90ರ ದಶಕದಲ್ಲಿ ಬೃಹತ್ ಪ್ರಮಾಣದಲ್ಲಿ ಸರ್ವಧರ್ಮ ಸಮ್ಮೇಳನಗಳನ್ನು ನಾಲವಾರದ ನೆಲದಲ್ಲಿ ಆಯೋಜಿಸಿ ಧಾರ್ಮಿಕ ಭಾವೈಕ್ಯತೆಗೆ ಶ್ರಮಿಸಿದ ಹಿರಿಮೆ ನಾಲವಾರ ಶ್ರೀಮಠದ್ದಾಗಿದೆ.
ಮಠವೆಂದರೆ ಕೇವಲ ಧಾರ್ಮಿಕ ಚಟುವಟಿಕೆಗಳ, ದರ್ಶನ – ಆಶೀರ್ವಾದಗಳ ಕೇಂದ್ರವಾಗದೆ ಅದೊಂದು ಸಾಮಾಜಿಕವಾಗಿ, ಮಾನಸಿಕವಾಗಿ ನೊಂದು ಬೆಂದವರ ಪಾಲಿಗೆ ನೆಮ್ಮದಿ ಕರುಣಿಸುವ ತಾಣವಾಗಬೇಕೆಂಬ ಧ್ಯೇಯದೊಂದಿಗೆ ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿದೆ.
ಅಂತೆಯೇ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ನಾಲವಾರದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠಕ್ಕೆ ದೇಶದ ಪ್ರಧಾನಮಂತ್ರಿಗಳು, ಹಲವು ರಾಜ್ಯಗಳ ಅನೇಕ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ರಾಜ್ಯಪಾಲರು, ಕೇಂದ್ರ ಸಚಿವರು ಸೇರಿದಂತೆ ಹಲವು ರಾಜಕೀಯ ನೇತಾರರು, ಪೇಜಾವರ, ಸಿದ್ದಗಂಗಾ, ಆದಿಚುಂಚನಗಿರಿ, ಕೊಪ್ಪಳ, ಗದಗ ಜಗದ್ಗುರುಗಳು ಸೇರಿದಂತೆ ಅನೇಕ ಧಾರ್ಮಿಕ ಲೋಕದ ದಿಗ್ಗಜ ಮಠಾಧೀಶರು, ಕನ್ನಡದ ಮೇರುನಟ ಡಾ.ರಾಜಕುಮಾರ, ಡಾ.ಅಂಬರೀಶ, ಯಶ್ ಸೇರಿದಂತೆ ಅನೇಕ ನಟರು, ಎಸ್.ಪಿ ಬಾಲಸುಬ್ರಮಣ್ಯಂ ಸೇರಿದಂತೆ ಪ್ರಸಿದ್ಧ ಗಾಯಕರು ಸೇರಿದಂತೆ ವಿವಿಧ ರಂಗಗಳ ಶ್ರೇಷ್ಠ ಸಾಧಕರು ನಾಲವಾರದ ಪುಣ್ಯನೆಲಕ್ಕೆ ಆಗಮಿಸಿ ಧನ್ಯತೆಯ ಭಾವವನ್ನು ಅನುಭವಿಸಿದ್ದಾರೆ.
ಮಹಾಮಠದ ಮಹಾಜಾತ್ರೆಗೆ ವೈಚಾರಿಕತೆಯ ಸಾಂಸ್ಕೃತಿಕ ಸ್ಪರ್ಷ ನೀಡಿರುವ ಮಠದ ಪ್ರಸ್ತುತ ಪೀಠಾಧಿಪತಿ, ಸಾಹಿತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಜಾತ್ರೆಯ ಸಂದರ್ಭದಲ್ಲಿ ಹತ್ತು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮಾನಸದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಬಿತ್ತುವ ಜೊತೆಗೆ ಜಾತ್ರೆಯನ್ನು ಜನೋತ್ಸವವಾಗಿ ರೂಪುಗೊಳಿಸಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಅನುಪಮ ಸಾಧನೆ ಮಾಡಿದ ಗಣ್ಯ ಸಾಧಕರಿಗೆ ಶ್ರೀಮಠದ ವತಿಯಿಂದ ಪ್ರತಿಷ್ಠಿತ “ಶ್ರೀ ಸಿದ್ಧತೋಟೇಂದ್ರ ಪ್ರಶಸ್ತಿ” ನೀಡಿ ಗೌರವಿಸುವ ಜೊತೆಗೆ, ಧಾರ್ಮಿಕ ಲೋಕದಲ್ಲಿ ಅದ್ವಿತೀಯ ಸ್ಥಾನ ಪಡೆದ ಪೂಜ್ಯ ಮಠಾಧೀಶರನ್ನು, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಲೋಕದ ಗಣ್ಯಾತಿಗಣ್ಯರನ್ನು ಆಹ್ವಾನಿಸಿ ಅವರಿಂದ ನೆರೆದ ಲಕ್ಷಾಂತರ ಭಕ್ತರಿಗೆ ಹೊಸವಿಚಾರ, ಉತ್ತಮ ಮಾರ್ಗದರ್ಶನ ನೀಡುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.
ಕಲಾಲೋಕದಲ್ಲಿ ಮಿಂಚಿದ, ಮಿಂಚುತ್ತಿರುವ ಹಲವಾರು ಕಲಾವಿದರ ಕಲಾಪ್ರದರ್ಶನ, ಜಾನಪದ ಕಲಾತಂಡಗಳ ಸಾಂಸ್ಕೃತಿಕ ಕಲರವ ಜಾತ್ರೆಯ ಮೆರುಗನ್ನು ಹೆಚ್ಚಿಸುತ್ತವೆ.
ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಲಕ್ಷಾಂತರ ಆಸ್ತಿಕ ಭಕ್ತ ಮನಸ್ಸುಗಳು ಭಾಗವಹಿಸಿ ಸಂಭ್ರಮಿಸುವ ನಾಲವಾರ ಜಾತ್ರೆಯ ವೈಭವವನ್ನು ಕಣ್ತುಂಬಿಕೊಳ್ಳುವುದು ಒಂದು ಆನಂದ.
ಕಣ್ಣುಗಳಿದ್ದಾಗ ಕಾಶಿಯನ್ನು ಕಾಣಬೇಕು, ಕಾಲುಗಳಿದ್ದಾಗ ಗೋಕರ್ಣಕ್ಕೆ ಹೋಗಬೇಕು ಎನ್ನುವ ಮಾತಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದ ಜನ ಕಾಶಿಯ ವಿಶ್ವನಾಥನನ್ನು, ಗೋಕರ್ಣದ ಮಹಬಲೇಶ್ವರನನ್ನು ಕೋರಿಸಿದ್ಧೇಶ್ವರ ಮಹಾ ಶಿವಯೋಗಿಯಲ್ಲೆ ಕಾಣುತ್ತಾರೆ. ವರ್ಷಂಪ್ರತಿ ಜಾತ್ರೆಗೆ ಬರುವವರು, ಪ್ರತಿ ಅಮಾವಾಸ್ಯೆಗೆ ಬರುವವರು, ಪ್ರತಿ ವಾರ ಬರುವ ಭಕ್ತರು ಹೀಗೆ ಭಕ್ತರ ಪ್ರತ್ಯೇಕ ಗುಂಪುಗಳು ಇಲ್ಲಿ ಕಾಣಬಹುದು. ಎಲ್ಲರ ಸಂಗಮ ಜಾತ್ರೆಯಲ್ಲಿ ಕಾಣಬಹುದು.
ಇಲ್ಲಿ ಇನ್ನೊಂದು ವಿಶೇಷ ದೃಶ್ಯ ಕಾಣಸಿಗುವುದೆಂದರೆ ಅದು ಭಕ್ತರ ಹರಕೆಯ “ತನಾರತಿ” ಮಹೋತ್ಸವ ಆಸ್ತಿಕ ಭಕ್ತರು ಕೋರಿಸಿದ್ಧೇಶ್ವರ ಮಹಾ ಶಿವಯೋಗಿಯಲ್ಲಿ ಬೇಡಿಕೊಂಡ ಇಷ್ಟಾರ್ಥಗಳು ಗುರುವಿನ ಕೃಪೆಯಿಂದ ಈಡೇರಿದ ನಂತರ ಕೃತಜ್ಞತೆಯ ರೂಪದಲ್ಲಿ ಸಲ್ಲಿಸುವ ಹರಕೆಯ ಉತ್ಸವವೇ ಈ “ತನಾರತಿ”, ವಿಶೇಷವಾಗಿ ತಯಾರಿಸಿದ ಜ್ಯೋತಿಗಳನ್ನು ಶುಚೀರ್ಭೂತರಾಗಿ, ಅಮಾವಾಸ್ಯೆಯ ಮಧ್ಯರಾತ್ರಿ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದ ಕರ್ತೃ ಗದ್ದುಗೆಯ ಸುತ್ತಲೂ ಪ್ರದಕ್ಷಿಣೆ ಹಾಕುವ ದೃಶ್ಯ ನಿಜಕ್ಕೂ ನಯನಮನೋಹರವಾಗಿರುತ್ತದೆ.
ಪಾರಂಪರಿಕ ಉಡುಪಿನಲ್ಲಿ ಕಂಗೊಳಿಸುವ ಪೂಜ್ಯರು, ಅವರ ಹಿಂದೆ ಸಹಸ್ರಾರು ಭಕ್ತರು ತನಾರತಿಯ ಜ್ಯೋತಿಗಳನ್ನು ಹೊತ್ತು ಸಾಗುವ ಆ ಕ್ಷಣ ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು. ಅದಕ್ಕಾಗಿಯೇ ಈ ಉತ್ಸವವನ್ನು ದಕ್ಷಿಣ ಭಾರತದ ಮಹಾದೀಪಮೇಳವೆಂದು ಕರೆಯುವುದು. ಈ ತರಹದ ವಿಶಿಷ್ಟ ಉತ್ಸವ ನಾಡಿನ ಯಾವುದೇ ಭಾಗದಲ್ಲಿ ನೋಡಲು ಸಿಗುವುದಿಲ್ಲ.
ನಾಲವಾರ ಜಾತ್ರೆ ಕೇವಲ ಬೆಂಡು-ಬತ್ತಾಸು ತಿಂದು ಹೋಗುವ ಜಾತ್ರೆಯಾಗದೆ ಹೊಟ್ಟೆಗೆ ಪ್ರಸಾದ, ನೆತ್ತಿಗೆ ಜ್ಞಾನ, ಮನಸ್ಸಿಗೆ ಆನಂದ ನೀಡುವ ತ್ರಿವೇಣಿ ಸಂಗಮವೆಂದರೆ ತಪ್ಪಾಗಲಾರದು.
ಜಾತ್ರೆಗಾಗಿ ಮಠ ಮಾತ್ರವಲ್ಲದೆ ನಾಲವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು, ಆಗಮಿಸುವ ಭಕ್ತರ ಸ್ವಾಗತಕ್ಕಾಗಿ ಕಾತರದಿಂದ ಸಿದ್ದವಾಗಿ ನಿಂತಿರುತ್ತವೆ.
ಜಾತ್ರೆಯ ಸಿದ್ದತೆಗಾಗಿ ಸಾವಿರಾರು ಭಕ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ದುಡಿಯುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸಹಬಾಳ್ವೆ, ಸಹೋದರತ್ವ ಹಾಗೂ ಭಾವೈಕ್ಯತೆಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತವೆ.
ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರ ಅನ್ನದಾಸೋಹಕ್ಕಾಗಿ ವಿಶೇಷ ಭಕ್ಷ್ಯಗಳು ಸಿದ್ಧವಾಗಿ ಅತ್ಯಂತ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ನಡೆಯುತ್ತದೆ.
ಜಾತ್ರೆಗೆ ಹನ್ನೊಂದು ದಿನಗಳ ಮುಂಚಿತವಾಗಿ ಮಠದಲ್ಲಿ ಪುರಾಣ, ಪ್ರವಚನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಜಾನುವಾರುಗಳ ಜಾತ್ರೆ, ಗ್ರಾಮೀಣ ಕ್ರೀಡೆಗಳಾದ ಕೈಕುಸ್ತಿ ಹಾಗೂ ಜಾನಪದ ಪಂದ್ಯಾಟಗಳು ನಡೆದು ರಥೋತ್ಸವದ ಐದು ದಿನಗಳ ನಂತರ ನಡೆಯುವ ಕಳಸಾವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳುವುದು.
ಜಾತ್ರೆಗಾಗಿಯೇ ದೂರದೂರುಗಳಿಂದ ಬಂಧುಗಳನ್ನು ಆಮಂತ್ರಿಸಿ ಅವರಿಗೆ ಜಾತ್ರೆಯ ವೈಭವ, ಸಂಭ್ರಮ ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುವ ನಾಲವಾರ ಹಾಗೂ ಸುತ್ತಲಿನ ಗ್ರಾಮದ ಜನರು ನಾಲವಾರ ಜಾತ್ರೆಯನ್ನು ಹಬ್ಬದಂತೆ ಆಚರಿಸುವ ಪರಿಯೇ ನಿಜಕ್ಕೂ ಅದ್ಭುತ. ಮಠವನ್ನು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸದೆ ಸಾಮಾಜಿಕ ಸಾಂತ್ವಾನ ನೀಡುವ, ಸಾಹಿತ್ಯ-ಸಂಸ್ಕೃತಿಯ ಸೌರಭ ಸೂಸುವ ಅನ್ನ-ಅಕ್ಷರ ನೀಡುವ ಭವ್ಯ ತಾಣವಾಗಿಸಿದ ಮಠದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಈ ಭಾಗದ ಜನ ನಡೆದಾಡುವ ಮಾತನಾಡುವ ಮಹಾದೇವರೆಂದು ಅತ್ಯಂತ ಭಕ್ತಿ ಭಾವದಿಂದ ಗೌರವಿಸುತ್ತಾರೆ.
ಜೀವನದಲ್ಲಿ ಒಮ್ಮೆಯಾದರೂ ನಾಲವಾರ ಶ್ರೀಮಠಕ್ಕೆ ಸಂಪರ್ಕಿಸಿ ಅಲ್ಲಿ ನಡೆಯುವ ಜಾತ್ರೆಯನ್ನು ಕಣ್ಣಾರೆ ಕಂಡು ಆನಂದದಿಂದ ಅನುಭವಿಸಬೇಕು. ಇಲ್ಲಿ ಅಕ್ಷರಗಳು ಸೋಲುತ್ತವೆ ಭಕ್ತಿ-ಭಾವಗಳು ವಿಜೃಂಭಿಸುತ್ತವೆ. ಹಾಗಾದರೆ ಮತ್ತೇಕೆ ತಡ ಬನ್ನಿ ನಾಲವಾರದ ಜಾತ್ರೆಗೆ ಹೋಗೋಣ
- ಡಾ.ಸಿದ್ಧರಾಜರೆಡ್ಡಿ
ಸಾಂಸ್ಕೃತಿಕ ಸಂಘಟಕರು
ಯಾದಗಿರಿ