ಸ್ವಾವಲಂಬನೆ, ಘನತೆಯ ಬದುಕಿಗೆ ಸಾಕ್ಷರತೆ ಅಗತ್ಯ

ನಗರದ

ಕಲಬುರಗಿ: ಸಾಕ್ಷರತೆಯು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಅಂಶವಾಗಿದೆ, ವ್ಯಕ್ತಿಯನ್ನು ಸಮಾಜದಲ್ಲಿ ಘನತೆ ಹಾಗೂ ಸ್ವಾವಲಂಬನೆಯಿಂದ ಬದಕಲು ಸಹಾಯ ಮಾಡುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ್ ಹೇಳಿದರು. 

ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ “ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಸಾಕ್ಷರತೆಯು ಭರವಸೆಗೆ ಸೇತುವೆಯಾಗಿದೆ. ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ. ಜೀವಮಾನದ ಕಲಿಕೆಗೆ ಅಡಿಪಾಯವಾಗಿ ಸಾಕ್ಷರತೆಯ ಮಹತ್ವ ಉತ್ತೇಜಿಸಲು ಪ್ರತಿ ವರ್ಷ ‘ಸೆಪ್ಟೆಂಬರ್-8’ ರಂದು “ಅಂತರರಾಷ್ಟ್ರೀಯ ಸಾಕ್ಷರತಾ ದಿನ” ಆಚರಿಸಲಾಗುತ್ತದೆ. ಪ್ರತಿಯೊಬ್ಬರು ಓದುವಿಕೆ, ಬರವಣಿಗೆ ಮತ್ತು  ಸಂಖ್ಯಾಶಾಸ್ತ್ರ ಕೌಶಲ್ಯಗಳನ್ನು ಪಡೆಯಲು ಅವಕಾಶ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ನಿರಂತರ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು.   

ಸಾಕ್ಷರತೆ ಎಂದರೆ ಕೇವಲ ಓದುವ ಮತ್ತು ಬರೆಯುವ ಸಾಮರ್ಥ್ಯಕ್ಕಿಂತ ಹೆಚ್ಚಿನದು. ಇದು ಸ್ವತಂತ್ರ ಚಿಂತನೆ, ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವಿಕೆ, ಸಾಮಾಜಿಕ ಸಂಪರ್ಕ ಮತ್ತು ವೈಯಕ್ತಿಕ ಬೆಳವಣಿಗೆಯ ಹೆಬ್ಬಾಗಿಲು. ಸಾಕ್ಷರರಾಗಿರುವುದು ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ಪಡೆಯಲು, ಸಮಾಜದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ನಿವಾರಿಸಲು ಮತ್ತು ಶಾಂತಿಯುತ ಜಗತ್ತಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. 2025 ರಲ್ಲಿ ಬಹುಭಾಷಾ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ, ವೈವಿಧ್ಯತೆಯ ಮೌಲ್ಯ ಮತ್ತು ಕಲಿಕೆಯಲ್ಲಿ ಸ್ಥಳೀಯ ಭಾಷೆಗಳ ಪಾತ್ರವನ್ನು ಬಲಪಡಿಸುತ್ತದೆ ಎಂದು ನುಡಿದರು.

 ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿಯರಾದ ಚಂಪಾಕಲಾ ನೆಲ್ಲುರೆ, ಗೀತಾಂಜಲಿ ಹಡಪದ, ಮಂಜುಳಾ ನರೋಣಾ, ಸೇವಕಿ ಸಿದ್ದಮ್ಮ ಕೌಂಟೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *