ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಎಲೆಕ್ಟ್ರಿಕಲ್‌ ಸಿಟಿ ಬಸ್‌ಗಳ ಆರಂಭಿಸಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ಧಾರ

ಜಿಲ್ಲೆ

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಆಯ್ದ ನಗರಗಳಲ್ಲಿ ಸಂಚಾರ ದಟ್ಟಣೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಅಕ್ಟೋಬರ್‌ ಆರಂಭದಲ್ಲಿ 200 ಎಲೆಕ್ಟ್ರಿಕಲ್‌ ಸಿಟಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಪ್ರಧಾನಮಂತ್ರಿ ವಿದ್ಯುನ್ಮಾನ ಯೋಜನೆಯಡಿ (ಪಿಎಂಇ) ಮೊದಲ ಹಂತದಲ್ಲಿ ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್‌ ಬಸ್‌ಗಳನ್ನು ಓಡಿಸಲಾಗುತ್ತದೆ. ಸಾರಿಗೆ ನಿಗಮದ ಅನುದಾನದಲ್ಲಿ ಕೊಪ್ಪಳ, ವಿಜಯನಗರ, ಬೀದರ್‌ ಮತ್ತು ರಾಯಚೂರು ಜಿಲ್ಲೆಗಳಿಗೆ ಡೀಸೆಲ್‌ ಆಧರಿತ ನೂತನ ಸಿಟಿ ಬಸ್‌ಗಳನ್ನು ಪೂರೈಸಲಾಗುತ್ತದೆ. ಒಟ್ಟಾರೆ 200 ಎಲೆಕ್ಟ್ರಿಕಲ್‌ ಮತ್ತು 123 ಡೀಸೆಲ್‌ ಆಧರಿತ ಸಿಟಿ ಬಸ್‌ಗಳನ್ನು ಓಡಿಸಲು ಯೋಜಿಸಲಾಗಿದೆ.

ಜಿಲ್ಲಾವಾರು ಮಾಹಿತಿ
ಕಲುಬುರಗಿ ಜಿಲ್ಲೆಗೆ 100, ವಿಜಯಪುರ ಹಾಗೂ
ಬಳ್ಳಾರಿ ಜಿಲ್ಲೆಗಳಿಗೆ ತಲಾ 50 ಎಲೆಕ್ನಿಕಲ್ ಸಿಟಿ ಬಸ್‌ಗಳನ್ನು ಪೂರೈಸಲಾಗುತ್ತದೆ. ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಿಗೆ ತಲಾ 30 ಡೀಸೆಲ್‌ ಆಧರಿತ ಸಿಟಿ ಬಸ್‌ಗಳನ್ನು ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 700 ಸಿಟಿ ಬಸ್‌ಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಹೊಸದಾಗಿ 323 ಸಿಟಿ ಬಸ್‌ಗಳು ಅಕ್ಟೋಬರ್‌ ಮೊದಲ ವಾರದಿಂದ ರಸ್ತೆಗೆ ಇಳಿಯುವ ನಿರೀಕ್ಷೆಯಿದೆ.

ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ
ಕಲಬುರಗಿ ಜಿಲ್ಲೆಯ ಕೇಂದ್ರ ಬಸ್‌ ನಿಲ್ದಾಣಕ್ಕೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಬಸ್‌ ಹಾಗೂ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಇದರಿಂದ ಮಿತಿ ಮೀರಿದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಡೆಯಲು ಕಲಬುರಗಿ ಹೊರ ವಲಯದ ಕೆಎಂಎಫ್‌ ಡೈರಿ, ಆಳಂದ ರಸ್ತೆಯ ಕೃಷಿ ವಿಶ್ವವಿದ್ಯಾಲಯದ ಸಮೀಪ, ಕಲಬುರಗಿ ವಿಶ್ವ ವಿದ್ಯಾಲಯದ ಸಮೀಪ ಸೇರಿ 4 ಕಡೆ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಗತ್ಯ ಆಧರಿಸಿ 200 ಎಲೆಕ್ಟ್ರಿಕಲ್‌ ಸಿಟಿ ಬಸ್‌ ಹಾಗೂ 123 ಡೀಸೆಲ್‌ ಆಧರಿತ ಸಿಟಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ.

  • ಸುಶೀಲಾ ವ್ಯವಸ್ಥಾಪಕ ನಿರ್ದೇಶಕಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ, ಕಲಬುರಗಿ.

Leave a Reply

Your email address will not be published. Required fields are marked *