ನಾಲವಾರ: ಆ.21 ರಂದು ಭಕ್ತರಿಗೆ ಗುರುದೀಕ್ಷಾ, ಅಯ್ಯಾಚಾರ ಕಾರ್ಯಕ್ರಮ

ತಾಲೂಕು

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಷ್ಟಲಿಂಗ ಸಹಿತ ಗುರುಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆಯುತ್ತಿದ್ದು, ಶ್ರಾವಣ ಸಂಭ್ರಮ ಕಳೆಗಟ್ಟಿದೆ ಎಂದು ಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ.

ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣದ ಕೊನೆಯ ಗುರುವಾರ ಆಗಸ್ಟ್ 21ರಂದು ಶ್ರೀಮಠದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಭಕ್ತರಿಗೆ ಗುರುದೀಕ್ಷೆ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಮತ್ತು ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಾಲವಾರ ಶ್ರೀಮಠದ ಕೈಲಾಸ ಮಂಟಪದಲ್ಲಿ ಪ್ರತಿನಿತ್ಯ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಮಹಾ ಪಾದಪೂಜೆಯು ಅತ್ಯಂತ ವೈಭವದಿಂದ ನಡೆಯುತ್ತಿದೆ ಎಂದರು.

ಪ್ರಸಿದ್ಧ ಗಾಯಕರ ಭಕ್ತಿ ಸಂಗೀತದೊಂದಿಗೆ ಸಿದ್ಧಸಿಂಹಾಸನಾರೂಢರಾಗಿ ಪೂಜೆಯಲ್ಲಿ ಪಾಲ್ಗೊಳ್ಳುವ ಶ್ರೀಗಳ ಇಷ್ಟಲಿಂಗ ಸಹಿತ ಮಹಾ ಪಾದಪೂಜೆ ಭಕ್ತ ಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದರು.

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಕೋರಿಸಿದ್ಧೇಶ್ವರ ಕರ್ತೃ ಗದ್ದುಗೆ ಹಾಗೂ ಪೂಜ್ಯರ ದರ್ಶನಕ್ಕಾಗಿ ನಾಡಿನ ವಿವಿಧ ಭಾಗಗಳ ಸಾವಿರಾರು ಭಕ್ತರು ತಂಡೋಪತಂಡವಾಗಿ ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ ಎಂದರು.

ಶ್ರೀಮಠದ ದಾಸೋಹಕ್ಕೆ ಸಲ್ಲಿಸಲು ಧಾನ್ಯಗಳು ತುಂಬಿದ ಚೀಲಗಳನ್ನು ಭುಜದ ಮೇಲೆ ಹೊತ್ತುಕೊಂಡು, ಮಳೆ-ಗಾಳಿಯ ಮಧ್ಯೆಯೂ ಕುಗ್ಗದೆ ಪಾದಯಾತ್ರೆ ಮೂಲಕ ಆಗಮಿಸುವ ದೃಶ್ಯ ಕಂಡುಬರುತ್ತಿದೆ ಎಂದರು.

ಗುರುವಾರ ನಡೆಯುವ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಹಾಗೂ ಲಿಂಗಧಾರಣೆ ಮತ್ತು ಗುರುದೀಕ್ಷಾ ಕಾರ್ಯಕ್ರಮದ ಸದುಪಯೋಗ ಸದ್ಭಕ್ತರು ಪಡೆದುಕೊಳ್ಳಬೇಕು ಎಂದು ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *