ಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅನನ್ಯ     

Uncategorized

ಕಲಬುರಗಿ: ಹಡಪದ ಅಪ್ಪಣ್ಣನವರು ಹನ್ನೆರಡನೇ ಶತಮಾನದ ಪ್ರಮುಖ ವಚನಕಾರರು ಮತ್ತು ಬಸವಣ್ಣನವರ ನಿಕಟವರ್ತಿ. ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದವರು ಎಂದು ಶರಣ ಚಿಂತಕ ದತ್ತು ಹಡಪದ ಹೇಳಿದರು.

 ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ಶರಣ ಹಡಪದ ಅಪ್ಪಣ್ಣನವರ 891ನೇ ಜಯಂತಿಯಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.        

 ಉಪನ್ಯಾಸಕ ಹಾಗೂ ಶರಣ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೆ ಹೆಸರಾದ “ಅನುಭವ ಮಂಟಪದಲ್ಲಿ” ಬಸವಣ್ಣನವರ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಣ್ಣನವರು, ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನು ಮಾಡುವ ಮೂಲಕ ಮೂಢನಂಬಿಕೆ, ಜಾತಿ ಪದ್ಧತಿಯ ನಾಶಕ್ಕಾಗಿ ಶ್ರಮಿಸಿದ್ದಾರೆ ಎಂದರು.              

ಅಪ್ಪಣ್ಣನವರ ಪತ್ನಿ ಲಿಂಗಮ್ಮನವರು ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿರುತ್ತದೆ. ಇವರು ಸುಮಾರು 250 ಕ್ಕೂ ಹೆಚ್ಚು ವಚನಗಳನ್ನು ‘ಅಪ್ಪಣ್ಣ ಪ್ರಿಯ ಚನ್ನಬಸವಣ್ಣ’ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ನುಡಿದರು. 

 ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಸುರೇಶ್ ಮಠದ್, ಸಿದ್ದಲಿಂಗ ತಳವಾರ, ರಣಜೀತ ದೇವಕಾರ್, ಪ್ರೀಯಾ ಬುಳ್ಳಾ, ದಕ್ಷರಾಜ ಮಠದ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *