ಚಿಕ್ಕಬಳ್ಳಾಪುರ: ಆಕೆ ಪದವೀಧರೆ. ಆತ ಪೊಲೀಸ್ ಕಾನ್ಸ್ಟೆಬಲ್. ಅವರಿಬ್ಬರು ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿ, ಪ್ರೇಮವೆಂದು ಸುತ್ತಾಡಿ ಬಳಿಕ ಮದುವೆ ಮಾಡಿಕೊಂಡಿದ್ದರು. ಅವರಿಬ್ಬರು ಮದುವೆಯಾಗಿ ಇನ್ನೂ ಒಂದು ವರ್ಷ ಕೂಡ ಆಗಿಲ್ಲ. ಆಗಲೆ ನೀನು ಬೇಡ, ನಿನ್ನ ಜೊತೆ ಸಂಸಾರವೂ ಬೇಡ ಎಂದು ಪೊಲೀಸ್ ಗಂಡ ಕಾಣೆಯಾಗಿದ್ದಾರೆ. ಇದರಿಂದ ವಿಚಲಿತಳಾಗಿರುವ ಪತ್ನಿ, ಪೊಲೀಸ್ ಗಂಡನನ್ನು ಹುಡುಕಿಕೊಡುವಂತೆ ಅವಲತ್ತುಕೊಂಡಿದ್ದಾರೆ.
27 ಆಗಸ್ಟ್ 2024 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ತಿಮ್ಮಣ್ಣ ಬೂಸರೆಡ್ಡಿ ಹಾಗೂ ಅದೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ನಿವಾಸಿ ಸಿರೀಶ ಎಂಬುವವರ ಮದುವೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿತ್ತು.
ಮದುವೆ ದಿನ ದೊಡ್ಡ ರಂಪಾಟ ನಡೆದಿತ್ತು. ಆದರೆ ಮದುವೆಯಾಗಿ ಇನ್ನು ಒಂದು ವರ್ಷವೂ ಆಗಿಲ್ಲ ಆಗಲೆ ಜೋಡಿಯ ಮಧ್ಯೆ ವಿರಹ, ಭಿನ್ನಾಭಿಪ್ರಾಯ, ಕಲಹ ಉಂಟಾಗಿದೆ, ತಿಮ್ಮಣ್ಣ, ಸಿರೀಶಳನ್ನು ಬೀದಿಯಲ್ಲೆ ಬಿಟ್ಟು ನಾಪತ್ತೆಯಾಗಿದ್ದಾರೆ. ಇದರಿಂದ ನಮ್ಮ ಸಂಸಾರ ಒಂದು ಮಾಡಿ ಎಂದು ಸಿರೀಶ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿಯನ್ನು ಭೇಟಿಯಾಗಿ ಅವಲತ್ತುಕೊಂಡಿದ್ದಾಳೆ.
ಕಾನ್ಸ್ಟೆಬಲ್ ತಿಮ್ಮಣ್ಣ ಅಮಾನತು
ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿದೆ, ಪೊಲೀಸ್ ಕಾನ್ಸ್ಟೆಬಲ್ ಆಗಿದ್ದ ತಿಮ್ಮಣ್ಣ ಹೆಂಡತಿಯಿಂದ ದೂರ ಉಳಿದಿದ್ದಾರೆ. ಇದರಿಂದ ಸಿರೀಶ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ರಿಂದ ಹಿಡಿದು ಎಡಿಜಿಪಿ ಹಿರಿಯ ಅಧಿಕಾರಿಗಳವರೆಗೂ ಗಂಡನ ಮೇಲೆ ದೂರು ನೀಡಿದ್ದಾರೆ. ಇದರಿಂದ ಅಧಿಕಾರಿಗಳು ಕಾನ್ಸ್ಟೆಬಲ್ ತಿಮ್ಮಣ್ಣನನ್ನು ಅಮಾನತು ಮಾಡಿದ್ದಾರೆ.
ತಿಮ್ಮಣ್ಣ ಪತ್ನಿ ಕಣ್ಣಿಗೆ ಕಾಣಿಸದೆ ನಾಪತ್ತೆಯಾಗಿದ್ದಾರೆ. ಇನ್ನು ಮನೆಯವರ ವಿರೋಧ ಕಟ್ಟಿಕೊಂಡು ಪೊಲೀಸ್ ತಿಮ್ಮಣ್ಣನನ್ನು ಪ್ರೀತಿಸಿ ವಿವಾಹವಾಗಿದ್ದ ಸಿರೀಶ ಈಗ ಅತ್ತ ದರಿ ಇತ್ತ ಪುಲಿ ಎಂತಾಗಿದೆ, ಅತ್ತ ತವರುಮನೆ, ಇತ್ತ ಗಂಡನ ಮನೆ ಇಲ್ಲದೆ ಬೀದಿಯಲ್ಲಿ ಬದುಕುವಂತಾಗಿದೆ.