ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

ಅಂತಾರಾಷ್ಟ್ರೀಯ

ಫ್ಲೋರಿಡಾ: 286 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುದೀರ್ಘ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ನಡಿಗೆ ಪೂರೈಸಿದ ಗಗಯಾತ್ರಿಗಳ ಸಾರ್ವಕಾಲಿಕ ದಾಖಲೆ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮತ್ತೊಂದು ದಾಖಲೆ
ಬಾಹ್ಯಾಕಾಶದಲ್ಲಿ ಸುದೀರ್ಘ ವಾಸದ ದಾಖಲೆ ಬರೆದ 2ನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಸುನಿತಾ ಅವರು ಪಾತ್ರರಾಗಿದ್ದಾರೆ. ಒಟ್ಟು 608 ದಿನಗಳು ಬಾಹ್ಯಾಕಾಶದಲ್ಲಿ ಕಳೆದಿದ್ದು, ಇತಿಹಾಸದ ಪುಟ ಸೇರಿದ್ದಾರೆ. ವೃತ್ತಿಜೀವನದಲ್ಲಿ ಮೂರು ಬಾರಿ ಬಾಹ್ಯಾಕಾಶ ಹಾರಾಟ ಪೂರ್ಣಗೊಳಿಸಿರುವ ಸುನಿತಾ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಕೆಲವು ಮಹತ್ವದ ಸಂಶೋಧನೆ ಮತ್ತು ಪರಿಶೋಧನಾ ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿದ್ದಾರೆ. ಅವರ ಕೆಲಸ, ವಿಶೇಷವಾಗಿ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ, ಅವರನ್ನು ನಾಸಾದ ಪ್ರಮುಖ ವ್ಯಕ್ತಿಯಾಗಿ ಗುರುತಿಸುತ್ತದೆ. ಇದೀಗ ವಿಶ್ವದಾಖಲೆ ಬರೆದಿರುವುದು ವಿಶ್ವದ ಹಾಗೂ ಭಾರತೀಯರ ಗಮನ ಸೆಳೆದಿದೆ.

2024ರ ಜೂನ್ 6ರಂದು ಸುನಿತಾ ಮತ್ತು ವಿಲ್ಮೋರ್ 8 ದಿನಗಳ ಕಾರ್ಯಾಚರಣೆಗಾಗಿ ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಬಾಹ್ಯಾಕಾಶ ನೌಕೆಯ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ 286 ದಿನಗಳನ್ನು ಪೂರೈಸಿದ ಸುನಿತಾ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸುದೀರ್ಘ ವಾಸ ಮಾಡಿದ ವಿಶ್ವದ 2ನೇ ಗಗನಯಾತ್ರಿ ಎನಿಸಿಕೊಂಡಿದ್ದಾರೆ. ಸುನಿತಾ ಅವರು ಒಟ್ಟಾರೆ 608 ದಿನಗಳು ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದಿದ್ದಾರೆ. ಇನ್ನೂ 675 ದಿನಗಳು ಬಾಹ್ಯಾಕಾಶ ಪೂರೈಸಿರುವ ಪೆಗ್ಗಿ ವಿಟ್ಸನ್‌ ಮೊದಲ ಸ್ಥಾನದಲ್ಲಿದ್ದಾರೆ.

ಬಾಹ್ಯಾಕಾಶದಲ್ಲಿ ಹೆಚ್ಚು ಸಮಯ ಕಳೆದವರು ಯಾರು ?

  • ಪೆಗ್ಗಿ ವಿಟ್ಸನ್ – 675 ದಿನಗಳು
  • ಸುನಿತಾ ವಿಲಿಯಮ್ಸ್ – 608 ದಿನಗಳು
  • ಜೆಫ್ ವಿಲಿಯಮ್ಸ್ – 534 ದಿನಗಳು
  • ಮಾರ್ಕ್ ವಂದೇ ಹೇ – 523 ದಿನಗಳು
  • ಸ್ಕಾಟ್ ಕೆಲ್ಲಿ – 520 ದಿನಗಳು

ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 12,13,47,491 ಮೈಲುಗಳು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳು ಕಳೆದ ಇವರು ಭೂಮಿಯ ಸುತ್ತ 4,576 ಬಾರಿ ಕಕ್ಷೆಗಳನ್ನು ಸುತ್ತಿದ್ದಾರೆ ಎಂದು ನಾಸಾ ಹೇಳಿದೆ. ವಿಲಿಯಮ್ಸ್ ತನ್ನ ಮೂರು ಹಾರಾಟಗಳಲ್ಲಿ 608 ದಿನಗಳ ಬಾಹ್ಯಾಕಾಶದಲ್ಲಿ ಕಳೆದಿದ್ದರೆ, ವಿಲ್ಮೋರ್ ತನ್ನ ಮೂರು ಹಾರಾಟಗಳಲ್ಲಿ 464 ದಿನಗಳು ಬಾಹ್ಯಾಕಾಶದಲ್ಲಿ ಪೂರೈಸಿದ್ದಾರೆ.

Leave a Reply

Your email address will not be published. Required fields are marked *