ಡಿವಿಜಿ ಆಧುನಿಕ ಸರ್ವಜ್ಞ, ಪುತಿನ ಕೊಡುಗೆ ಅಪಾರ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಬರೆದಂತೆ ಬದುಕಿದ ಅಪರೂಪದ ಸಾಹಿತಿ ಡಿವಿಜಿಯವರು ಆಧುನಿಕ ಸರ್ವಜ್ಞರಾಗಿದ್ದಾರೆ. ಪು.ತಿ ನರಸಿಂಹಚಾರ್ಯರು ಭಾವಗೀತೆ, ಗೀತನಾಟಕ, ಭಾವನಾಚಿತ್ರ, ರಸಚಿತ್ರ, ಸಂಗೀತರೂಪಕ, ಪ್ರಬಂಧ, ವಿಚಾರ ಸಾಹಿತ್ಯ, ಸಣ್ಣಕಥೆ, ಗದ್ಯನಾಟಕ, ಮಹಾಕಾವ್ಯ ಸೇರಿದಂತೆ ಹತ್ತು ಹಲವು ಪ್ರಕಾರದ ಸಾಹಿತ್ಯ ಕೃಷಿ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ
ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಶಿವನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಂಜೆ ಜರುಗಿದ ಕನ್ನಡದ ಮೇರು ಸಾಹಿತಿ ‘ಡಾ.ಡಿ.ವಿ ಗುಂಡಪ್ಪ ಮತ್ತು ಪು.ತಿ ನರಸಿಂಹಚಾರ್ಯರ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಉಭಯ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಬರವಣಿಗೆ ಮತ್ತು ಬದುಕಿನಲ್ಲಿ ಸಾಮ್ಯತೆಯಿರುವವರು ಬೆರಳಣಿಕೆಯಷ್ಟು. ಜೀವನದ ನೈಜತೆ, ಮೌಲ್ಯಗಳು, ಮೇರು ಸಂದೇಶವನ್ನು ಡಿವಿಜಿಯವರು ತಮ್ಮ ಅನುಭಾವದ ಸಾಹಿತ್ಯದ ಮೂಲಕ ಸಾರಿದ್ದಾರೆ. ‘ಕಗ್ಗ ಕವಿ’ ಎಂದೆ ಖ್ಯಾತಿ ಪಡೆದಿರುವ ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವನ್ನು ಗಳಿಸಿದ್ದರು. ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಕೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಮಾರು ಏಳು ದಶಕಗಳಷ್ಟು ಸುಧೀರ್ಘಕಾಲ ಸೇವೆ ಸಲ್ಲಿಸಿದ್ದಾರೆ ಎಂದರು.

ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಕನ್ನಡ ಸಾರಸತ್ವ ಲೋಕದ ಚಿರಕೃತಿ ಎಂದರೆ ‘ಮಂಕುತಿಮ್ಮನ ಕಗ್ಗ’ವಾಗಿದೆ. ಈ ಗ್ರಂಥದ ಬಗ್ಗೆ ಕನ್ನಡಿಗರಿಗೆಲ್ಲ ಅಪಾರವಾದ ತುಂಬು ಹೃದಯದ ಅಭಿಮಾನವಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಸಿದ್ದರಾಮ ತಳವಾರ, ಬಸವರಾಜ ಮುನ್ನಳ್ಳಿ, ಸಂಗಮೇಶ ಕೊರಳ್ಳಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *