ರೈತರು ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಜಿಲ್ಲೆ

ಕಲಬುರಗಿ: ಸಾವಯುವ ಗೊಬ್ಬರದ ವ್ಯಾಪಕ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ, ಕೃಷಿಕ ಸಮಾಜದ ಸದಸ್ಯ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.

ಆಳಂದ ರಸ್ತೆಯ ಸುಂಟನೂರ ಕ್ರಾಸ್ ಸಮೀಪ ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ತೋಟದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ತೋಟಗಾರಿಕೆ ಕೃಷಿ ಕ್ಷೇತ್ರ ಭೇಟಿ ಹಾಗೂ ರೈತರಿಗೆ ಸಲಹೆಗಳು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಯಾವುದೆ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು. ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ, ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ ಎಂದರು.


ಪ್ರಗತಿಪರ ರೈತ ಸಂತೋಷ ಹಿರಮಶೆಟ್ಟಿ ಮಾತನಾಡಿ, ಒಂದು ಎಕರೆ ತೋಟದಲ್ಲಿ ಬೇಸಿಗೆ ಶೇಂಗಾ ಮಾಡಲಾಗಿದೆ. ಅರ್ಧ ಎಕರೆಯಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳಿವೆ. ಉಳಿದ ಅರ್ಧ ಎಕೆರೆ ಪ್ರದೇಶದಲ್ಲಿ ಸರ್ಕಾರಿ ಹುಲ್ಲು, ಈರುಳ್ಳಿ ಬೆಳೆಯಲಾಗಿದೆ. ಇದಲ್ಲದೆ ಒಣ ಬೇಸಾಯದಡಿಯಲ್ಲಿ ತೊಗರಿ, ಜೋಳ, ಗೋದಿ ಬೆಳೆಯಲಾಗಿದೆ. ಹೈನುಗಾರಿಕೆ ಇದೆ. ಶೃದ್ಧೆಯಿಂದ ಕೃಷಿ ಕಾಯಕ ಮಾಡಿದರೆ ಒಕ್ಕುಲತನ ನಷ್ಟ ಅನುಭವಿಸುವುದಿಲ್ಲ ಎಂದರು.


ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಅಸ್ಲಾಂ ಶೇಖ್, ಮಹಾದೇವಪ್ಪ ಎಚ್.ಬಿರಾದಾರ ಸೇರಿದಂತೆ ಇನ್ನಿತರರಿದ್ದರು

Leave a Reply

Your email address will not be published. Required fields are marked *