ಕಲಬುರಗಿ: ವಿಶ್ವ ಪ್ರಸಿದ್ಧ ಭೌತ ವಿಜ್ಞಾನಿ ಅಲ್ಬರ್ಟ್ ಐನ್’ಸ್ಟೀನ್ ಅವರು ಇ=ಎಂಸಿ(2) ಎಂಬ ‘ಸಾಪೇಕ್ಷತಾ ಸಿದ್ಧಾಂತ’ದ ಮೂಲಕ ಭೌತ ವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಜಗದ್ವಿಖ್ಯಾತ ಭೌತವಿಜ್ಞಾನಿ ಅಲ್ಬರ್ಟ್ ಐನ್’ಸ್ಟೀನ್ ಜನ್ಮದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಯಾವುದೆ ಒಂದು ರಾಷ್ಟ್ರದ ಅಭಿವೃದ್ಧಿಯು ಅಲ್ಲಿನ ವಿಜ್ಞಾನ ಕ್ಷೇತ್ರದ ಬೆಳವಣಿಗೆಯ ಮೇಲೆ ಅವಲಂಬಿಸಿದೆ. ಅನೇಕ ವಿಜ್ಞಾನಿಗಳು ತಮ್ಮ ಜೀವ ಸವೆಸಿ ವಿಜ್ಞಾನ ಕ್ಷೇತ್ರ ಬೆಳೆಸಿದ್ದಾರೆ ಎಂದರು.
ಐನ್’ಸ್ಟೀನ್ ಅವರು 1879ರಲ್ಲಿ ಜರ್ಮನಿಯ ಅಲ್ಮ್ ಎಂಬಲ್ಲಿ ಜನಿಸಿದರು. ಕ್ವಾಂಟ್ ಮೆಕಾನಿಕ್ಸ್ ಕ್ಷೇತ್ರದಲ್ಲಿಯೂ ಕೂಡಾ ಗಣನೀಯ ಸೇವೆ ಸಲ್ಲಿಸಿದ್ದಾರೆ. 1921ರಲ್ಲಿ ನೋಬೆಲ್ ಪ್ರಶಸ್ತಿ ದೊರೆತಿದೆ. ಇಂಥ ಮೇರು ವಿಜ್ಞಾನಿಗಳ ಬಗ್ಗೆ ಅಧ್ಯಯನ ಮಾಡಿ, ಅವರಂತೆ ಸಂಶೋಧನೆ ಮಾಡುವ ಮೂಲಕ ವಿಜ್ಞಾನಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಮಹಾದೇವಪ್ಪ ಎಚ್.ಬಿರಾದಾರ, ಓಂಕಾರ ವಠಾರ, ಬಸವರಾಜ ಎಸ್.ಪುರಾಣೆ, ಸಿದ್ದಾರೂಡ ಬಿರಾದಾರ ಸೇರಿದಂತೆ ಅನೇಕರು ಇದ್ದರು.