ನಮ್ಮಲ್ಲಿ ಚಿನ್ನಕ್ಕಿರುವ ಬೇಡಿಕೆ, ಮೌಲ್ಯ ಮತ್ತೊಂದಕ್ಕಿಲ್ಲ ಎಂದರೆ ಖಂಡಿತ ತಪ್ಪಾಗಲಾರದು. ಇಂದಿನ ಕಾಲಘಟ್ಟದಲ್ಲಿ ಯಾರನ್ನು ನೋಡಿದರೂ ಚಿನ್ನದ ಖರೀದಿ ಅಥವಾ ಅದರ ದರಗಳತ್ತ ಹೆಚ್ಚಾಗಿ ಗಮನಹರಿಸುತ್ತಾರೆ. ಇದು ತೀರ ಸಾಮಾನ್ಯವಾಗಿಬಿಟ್ಟಿದೆ. ಚಿನ್ನದತ್ತ ಒಲವು ತೋರುವ ಜನರು, ಪ್ರತಿದಿನ ಗೋಲ್ಡ್ ದರ ಎಷ್ಟಾಗಿರುತ್ತೆ ?
ದರದಲ್ಲಿ ಕುಸಿತ ಕಂಡರೆ ಸಾಕಪ್ಪ ಇಳಿದಿರಬಹುದು ಎಂಬ ಯೋಚನೆಯಲ್ಲಿ ಮುಳುಗಿರುತ್ತೆವೆ. ಆದರೆ ನಾವು ಅಂದುಕೊಂಡಂತೆ ಮಾರುಕಟ್ಟೆಯಲ್ಲಿ ದರ ಏರಿಕೆ – ಇಳಿಕೆ ಆಗುವುದಿಲ್ಲ. ಯಾವಾಗ ದಿಢೀರ್ ಏರುತ್ತದೆ ಮತ್ತು ಕುಸಿಯುತ್ತದೆ ಎಂಬುದನ್ನು ಅರಿಯುವುದು ಕಷ್ಟ.
ಯಾರಿಗಿಲ್ಲ ಚಿನ್ನದ ಆಸೆ
ವಾಸ್ತವವಾಗಿ, ನಾವು ಭಾರತೀಯರು ಚಿನ್ನದೊಂದಿಗೆ ಎಲ್ಲಿಲ್ಲದ ನಂಟನ್ನು ಹೊಂದಿದ್ದೆವೆ. ಚಿನ್ನ ನಮ್ಮ ಸ್ಥಳೀಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಪ್ರತಿದಿನ ಚಿನ್ನದ ಬೆಲೆ ಇಳಿಕೆಯತ್ತ ಎದುರು ನೋಡುವ ಜನರು, ದರದಲ್ಲಿ ದಿಢೀರ್ ಕುಸಿತ ಕಂಡರೆ ತಕ್ಷಣ ಖರೀದಿಗೆ ಮುಂದಾಗುತ್ತಾರೆ. ಚಿನ್ನದ ಬಗ್ಗೆ ಅತಿಯಾದ ಒಲವು, ಗೀಳು ನಮ್ಮಲ್ಲಿದೆ. ಈಗ ಎಲ್ಲರೂ ಚಿನ್ನವನ್ನು ಹೂಡಿಕೆಯ ಅಸ್ತ್ರವನ್ನಾಗಿ ನೋಡುತ್ತಾರೆ. ಭವಿಷ್ಯದಲ್ಲಿ ಚಿನ್ನ ಒಂದು ಆರ್ಥಿಕ ಭದ್ರತೆ ಎಂಬ ನಂಬಿಕೆ ಜನರಲ್ಲಿ ದೃಢವಾಗಿದೆ.
ಕಳೆದ ಕೆಲವು ವಾರಗಳಿಂದ ಚಿನ್ನವು ಗಗನದ ಬಾಗಿಲು ತಟ್ಟುತ್ತಿದೆ. ಪ್ರಸ್ತುತ 24 ಕ್ಯಾರೆಟ್ ಚಿನ್ನದ 10 ಗ್ರಾಂ ಗೆ ಬರೋಬ್ಬರಿ 89 ಸಾವಿರ ರೂ. ಇದೆ. ಈ ದರದಲ್ಲಿ ಶೀಘ್ರ ಬದಲಾವಣೆ ಆಗಲಿದ್ದು, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯೂ 90 ಸಾವಿರ ರೂ. ಗಡಿದಾಟುವುದರಲ್ಲಿ ಅನುಮಾನವೆ ಇಲ್ಲ. ಪ್ರತಿನಿತ್ಯದ ಗೋಲ್ಡ್ ದರದಲ್ಲಿ ಬದಲಾವಣೆ ಕಂಡುಬರುತ್ತದೆ. ಇಂದು ಬೆಳಗ್ಗೆ ಒಂದು ದರವಿದ್ದರೆ, ಸಂಜೆಯ ನಂತರ ಮತ್ತೊಂದು ಬದಲಾವಣೆಯತ್ತ ಸಮೀಪಿಸಿರುತ್ತದೆ. ದೇಶದ ಆಯಾ ರಾಜ್ಯಗಳನ್ನು ಅವಲಂಬಿಸಿ ಚಿನ್ನದ ಬೆಲೆ ಏರಿಕೆಯಾಗುತ್ತವೆ. ಇದರಲ್ಲಿ ಕೊಂಚ ಬದಲಾವಣೆಗಳು ಇರುತ್ತವೆ.
ಚಿನ್ನದ ಬೆಲೆ ನಿರ್ಧರಿಸುವವರು ಯಾರು ?
ಚಿನ್ನದ ಬೆಲೆಯಲ್ಲಿ ಏರಿಕೆ, ಇಳಿಕೆಗೆ ಹಲವು ಕಾರಣಗಳಿವೆ. ಚಿನ್ನ ನಿಜವಾಗಿಯೂ ಯಾವಾಗ ಇಳಿಯಬೇಕು ? ಯಾವ ದಿನ ಹೆಚ್ಚಳವಾಗಬೇಕು ಎಂಬುದು ಅಸಲಿಗೆ ಯಾರು ನಿರ್ಧರಿಸುತ್ತಾರೆ ಎಂದು ನಿಮಗೆ ತಿಳಿದಿದೆಯೆ ? ಇದನ್ನೆಲ್ಲ ನಿರ್ಧರಿಸಿ, ದರದಲ್ಲಿ ವ್ಯತ್ಯಾಸ ತರುವವರು ಯಾರು ? ಎಂಬ ಪ್ರಶ್ನೆ ಖಂಡಿತ ನಮ್ಮನ್ನು ಕಾಡುತ್ತದೆ, ನಮ್ಮ ದೇಶದಲ್ಲಿ ಚಿನ್ನದ ಬೆಲೆ ನಿರ್ಧರಿಸುವವರು ಯಾರು ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಶುದ್ಧತೆಯ ಆಧಾರದ ಮೇಲೆ ನಾವು ಚಿನ್ನವನ್ನು ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ. 18 ಕ್ಯಾರೆಟ್, 22 ಕ್ಯಾರೆಟ್ ಮತ್ತು 24 ಕ್ಯಾರೆಟ್. ಇದರ ದರಗಳಲ್ಲಿ ಪ್ರತಿದಿನ ಬದಲಾವಣೆಯನ್ನು ನಿರ್ಧರಿಸುವುದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್. ಈ ಸಂಸ್ಥೆ ಆಯಾ ದಿನದಲ್ಲಿ ಚಿನ್ನದ ದರದಲ್ಲಿ ಆಗುವ ಏರಿಕೆ ಮತ್ತು ಇಳಿಕೆ ಸೂಚಿಸುತ್ತದೆ.
ಚಿನ್ನದ ಬೆಲೆಗಳ ನಿರ್ಧಾರ ಹೇಗೆ ?
ಭಾರತೀಯ ಬುಲಿಯನ್ ಮತ್ತು ಆಭರಣ ವ್ಯಾಪಾರಿಗಳ ಸಂಘ (IBJA) ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರ್ಧರಿಸುತ್ತದೆ. ಐಬಿಜೆಎ ಸಂಸ್ಥೆಯು ನಮ್ಮ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ನಿರ್ಧರಿಸಿ, ಜನರ ಮುಂದೆ ಬಹಿರಂಗಪಡಿಸುತ್ತದೆ. ಈ IBJA ಸಂಸ್ಥೆಯು ನಮ್ಮ ದೇಶದ ಅನೇಕ ದೊಡ್ಡ ಚಿನ್ನದ ವ್ಯಾಪಾರಿಗಳೊಂದಿಗೆ ಪ್ರತಿದಿನ ಚರ್ಚಿಸುತ್ತದೆ. ಇದಲ್ಲದೆ ಇದು ವಿತರಕರ ಚಿನ್ನದ ಖರೀದಿ ಮತ್ತು ಮಾರಾಟದ ಉಲ್ಲೇಖಗಳನ್ನು ಲೆಕ್ಕಾಚಾರ ಮಾಡುತ್ತದೆ. ಇದು ಸ್ಥಳೀಯ ತೆರಿಗೆಗಳು, ಆಮದು ತೆರಿಗೆಗಳು ಮತ್ತು ಕರೆನ್ಸಿ ಏರಿಳಿತಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಹೀಗಾಗಿ ಗೋಲ್ಡ್ಗೆ ಸೂಕ್ತವಾದ ಬೆಲೆ ನಿರ್ಧರಿಸುತ್ತದೆ ಮತ್ತು ಹೊಂದಿಸುತ್ತದೆ. ನಂತರ ಪ್ರತಿದಿನ ಚಿನ್ನದ ಬೆಲೆಗಳನ್ನು ಪ್ರಕಟಿಸುತ್ತದೆ.
ಲೆಕ್ಕಾಚಾರದ ಸೂತ್ರ ?
ದೇಶದಲ್ಲಿ ಚಿನ್ನದ ಬೆಲೆಯನ್ನು ಶುದ್ಧತೆಯ ಅವಲಂಬಿಸಿ ಎರಡು ರೀತಿಯಲ್ಲಿ ಲೆಕ್ಕಚಾರ ಮಾಡಲಾಗುತ್ತದೆ. ಅವುಗಳಲ್ಲಿ ಒಂದು ಶುದ್ಧತೆ ವಿಧಾನ (%): ಚಿನ್ನದ ಮೌಲ್ಯ = (ಚಿನ್ನದ ದರ x ಶುದ್ಧತೆ x ತೂಕ) / 24. ಎರಡನೆಯದು ಕ್ಯಾರೆಟ್ ವಿಧಾನ, ಇದನ್ನು ಚಿನ್ನದ ಮೌಲ್ಯ = (ಚಿನ್ನದ ದರ x ಶುದ್ಧತೆ x ತೂಕ) / 100 ಆಧರಿಸಿ ಲೆಕ್ಕಹಾಕಲಾಗುತ್ತದೆ.
ಮಾರಾಟ, ಡೀಲರ್ ಖರೀದಿಗಳು, ದೇಶದ ಆರ್ಥಿಕ ಪರಿಸ್ಥಿತಿಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿಗಳು ಸಹ ಚಿನ್ನದ ಬೆಲೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಚಿನ್ನದ ಬೆಲೆಗಳನ್ನು 22 ಕ್ಯಾರೆಟ್‌ಗಳು/ಗ್ರಾಂ, 24 ಕ್ಯಾರೆಟ್‌ಗಳು/ಗ್ರಾಂ ಮತ್ತು 18 ಕ್ಯಾರೆಟ್‌ಗಳು/ಗ್ರಾಂ ನಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಅವುಗಳ ಬೆಲೆಗಳನ್ನು ಅಂದಾಜು ಮಾಡಲಾಗುತ್ತದೆ,(ಏಜೆನ್ಸೀಸ್).