ಕಲಬುರಗಿ: ಜೀವನದಲ್ಲಿ ಯಾವುದೆ ಸಂದರ್ಭದಲ್ಲಿಯೂ ಕೂಡ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವದು ಉತ್ತಮ. ಉತ್ತಮ ಚಿಂತನೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ವಿಶ್ವ ಚಿಂತನೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಆಲೋಚನೆಗಳೊಂದಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೊಸ- ಹೊಸ ಯೋಚನೆಗಳಿಂದ ಯೋಜನೆ ರೂಪಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಈ ದಿನವನ್ನು ಸ್ಕೌಟ್ ಮತ್ತು ಗೈಡ್ ದಿನ ಎಂತಲೂ ಕರೆಯಲಾಗುತ್ತದೆ. ಈ ಸಂಸ್ಥೆಯ ಸ್ಥಾಪಕರಾದ ಲಾರ್ಡ್ ರಾಬರ್ಟ್ ಬೇಡನ್ ಪೊವೆಲ್ ಮತ್ತು ಲೇಡಿ ಓಲೇವ್ ಬೇಡನ್ ಪೊವೆಲ್ ಅವರ ಜನ್ಮದಿನದ ಸ್ಮರಣೆಗಾಗಿ ಆಚರಿಸಲಾಗುವದು.
ಮನುಷ್ಯನ ಜೀವನವು ಒಂದೆ ಕಡೆ ತಟಸ್ಥವಾಗಿರಬಾರದು, ಸದಾ ಹರಿಯುತ್ತಿರಬೇಕು. ಚಿಂತನೆಯ ಮಹತ್ವ ಸಾರಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಚಿಂತಕ, ಸಮಾಜ ಸೇವಕ ಹಾಗೂ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.