ಕಲಬುರಗಿ: ನಿರಂತರ ಅಧ್ಯಯನ, ಧನಾತ್ಮಕ ಚಿಂತನೆಯೊಂದಿಗೆ ನಿರಂತರವಾಗಿ ಪ್ರಯತ್ನಿಸಿದರೆ, ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಗುವಿವಿ ಸಿಂಡಿಕೇಟ್ ಸದಸ್ಯ ಹಾಗೂ ಪ್ರಗತಿಪರ ಚಿಂತಕ ಎಸ್.ಪಿ ಸುಳ್ಳದ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರಕಾರಿ ಪದವಿ ಪೂರ್ವ ಕಾಲೀಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾಲೇಜಿನ 67ನೇ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಗದಿತ ಗುರಿಯನ್ನಿಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು, ಶಾಂತತೆ, ಸಮಯ ಪ್ರಜ್ಞೆ, ದೃಢ ಸಂಕಲ್ಪ, ಛಲಗಾರಿಕೆ ಮೂಲಕ ಪ್ರಯತ್ನಿಸಿದರೆ ಜೀವನದಲ್ಲಿ ಸಾಧಿಸಲು ಸಾಧ್ಯ ಎಂದರು.
ವಾರ್ಷಿಕೋತ್ಸವ ಭಾಷಣ ಮಾಡಿದ ಚಿಂತಕ ಸಂತೋಷ ಹೂಗಾರ, ವಿದ್ಯಾರ್ಥಿಗಳೆ, ನಿಮ್ಮ ಕಲಿಕೆಯಲ್ಲಿ ಶೃದ್ಧೆಯಿರಲಿ. ವಿದ್ಯಾರ್ಥಿ ಜೀವನದ ಸದುಪಯೋಗ ಮಾಡಿಕೊಳ್ಳಿ. ಜೀವನದಲ್ಲಿ ಹೇಗೆ ಬದುಕಬೇಕು ಎಂಬುದು ಅರಿಯಿರಿ. ಅಮೂಲ್ಯವಾದ ಜ್ಞಾನವನ್ನು ಪಡೆದರೆ ಮಾತ್ರ ನಿಮಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ. ಗುರು-ಹಿರಿಯರು, ಪಾಲಕ-ಪೋಷಕರಿಗೆ ಗೌರವಿಸಿ. ನಿಮ್ಮ ಭವಿಷ್ಯದ ಶಿಲ್ಪಿಗಳು ನೀವಾಗಬೇಕು. ಮೌಢ್ಯತೆಯಿಂದ ಹೊರಬಂದು ವೈಚಾರಿಕತೆ ಬೆಳೆಸಿಕೊಳ್ಳಿ. ದೇವಾಲಯದ ಗಂಟೆಗಳಿಗಿಂತ ಶಾಲೆಗಳ ಗಂಟೆಗಳು ಹೆಚ್ಚಾದಾಗ ಮಾತ್ರ ರಾಷ್ಟ್ರ ಸದೃಢವಾಗಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಎಮ್ಮೆಲ್ಸಿ ಶಶೀಲ್ ಜಿ ನಮೋಶಿ, ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ, ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಮಾತನಾಡಿದರು.
ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ವಾಚಿಸಿದರು.
ಪ್ರತಿಭಾ ಪುರಸ್ಕಾರ: ಕಳೆದ ಸಾಲಿನ ದ್ವಿತೀಯ ಪಿಯುಸಿ ಟಾಪರ್ ಸಿದ್ದೇಶ್, ಖೊಖೊದಲ್ಲಿ ರಾಜ್ಯ ಮಟ್ಟದ ಸಾಧಕ ಆಕಾಶ್, ವಿಭಾಗೀಯ ಮಟ್ಟದ ಪ್ರಬಂಧ ಸ್ಪರ್ಧೆಯ ಸಾಧಕಿ ಮಲಕಮ್ಮ, ಬಹುಮಖಿ ಪ್ರತಿಭೆ ಶಾರದಾ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಹಡಪದ, ಉಪನ್ಯಾಸಕರಾದ ಅಸ್ಮಾ ಜಬೀನ್, ನಯಿಮಾ ನಾಹೀದ್, ಸುವರ್ಣಲತಾ ಭಂಡಾರಿ, ಮಲ್ಲಪ್ಪ ರಂಜಣಗಿ, ದುಂಡಪ್ಪ ಯರಗೋಳ, ಪ್ರ.ದ.ಸ ಪ್ರೇಮಾ ಸುರಪುರ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಸೇವಕ ಭಾಗಣ್ಣ ಹರನೂರ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರಾದ ಪೂಜಾ ಪ್ರಾರ್ಥಿಸಿದಳು, ಶಾರದಾ ನಿರೂಪಿಸಿದಳು, ಉಪನ್ಯಾಸಕಿಯರಾದ ಕೀರ್ತಿ ಭುಜುರಕೆ ಸ್ವಾಗತಿಸಿದರು. ರೇಣುಕಾ ಚಿಕ್ಕಮೇಟಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.