ಸುದ್ದಿ ಸಂಗ್ರಹ ಶಹಾಬಾದ
ದುಶ್ಚಟಗಳಿಗೆ ದಾಸರಾಗಿ, ಪ್ರೀತಿ-ಪ್ರೇಮ ಎಂಬ ಜಾಲಕ್ಕೆ ಸಿಲುಕಿ, ಹತಾಶರಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಿರುವ ಇಂದಿನ ಯುವ ಪೀಳಿಗೆಯ ಮುಂದಿನ ಭವಿಷ್ಯ ನೋಡಿದರೆ ಆತಂಕವುಂಟು ಮಾಡುತ್ತಿದೆ ಎಂದು ಧಾರವಾಡದ ಜನಜಾಗೃತಿ ವೇದಿಕೆಯ ಸಲಹೆಗಾರ ರಾಮಾಂಜಿನಪ್ಪ ಆಲ್ದಳ್ಳಿ ಹೇಳಿದರು.
ನಗರದ ಸಿದ್ದರಾಮೇಶ್ವರ ಶಾಲಾ ಮೈದಾನದಲ್ಲಿ ಎಐಡಿಎಸ್ಓ ಎಐಡಿವೈಓ ಹಾಗೂ ಎಐಎಂಎಸ್ಎಸ್ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನದ ಅಂಗವಾಗಿ ನಡೆದ 12ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತ ದೇಶದ ಇಂತಹ ಪರಿಸ್ಥಿತಿ ಮನಗಂಡು, ನೇತಾಜಿಯವರ ವಿಚಾರ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಅವಶ್ಯಕವಾಗಿದೆ. ಸಿನಿಮಾ ನಟರು, ಕ್ರೀಡಾ ತಾರೆಯರು, ನಾಯಕರು ನಮಗೆ ಸ್ಪೂರ್ತಿ ಅಲ್ಲಾ, ನಿಜವಾದ ಸ್ಪೂರ್ತಿ ಎಂದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆಗಬೇಕು ಎಂದರು.
ಕರ್ನಾಟಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬಾಲರಾಜ್ ಮಾಚನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೇತಾಜಿ ಅವರು ಭಾರತ ಸ್ವಾತಂತ್ರಕ್ಕಾಗಿ ಹೋರಾಡಿ, ಸೈನ್ಯವನ್ನು ಕಟ್ಟಿ ಹುರಿದುಂಬಿಸಿ ರಾಷ್ಟ್ರದ ವಿಮೋಚನೆಗಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ, ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ನೇತಾಜಿಯವರ ವಿಚಾರ ಎಲ್ಲರಿಗೂ ತಲುಪಿಸುವ ಕೆಲಸ ಸಂಘಟನೆಯವರು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮುಖಂಡರಾದ ಗುಂಡಮ್ಮ ಮಡಿವಾಳ, ಜಗನ್ನಾಥ ಎಸ್.ಹೆಚ್, ತುಳಜರಾಮ ಎನ್ ಕೆ, ಆರ್.ಕೆ ವೀರಭದ್ರಪ್ಪ, ವಿ.ಜಿ ದೇಸಾಯಿ, ಮಹೇಶ ನಾಡಗೌಡ, ದೇವಿಂದ್ರಪ್ಪ ಅಂಗಡಿ, ನಗರಸಭೆ ಸದಸ್ಯೆ ಸಾಬೇರ ಬೇಗಂ, ರಾಘವೇಂದ್ರ ಎ.ಜಿ, ಮಹಾದೇವಿ ಮಾನೆ, ಅಂಬಿಕಾ ಗುರರ್ಜಾಲ್ಕರ, ರಮೇಶ್ ದೇವಕರ್, ರಘು ಪವಾರ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಪ್ರಗತಿಪರ ನಾಟಕ, ಜಿ.ಬಿ ಸಂಗೀತ ಶಾಲೆಯಿಂದ ಸಂಗೀತ ಕಾರ್ಯಕ್ರಮ, ಖವ್ವಾಲಿ, ಹೋನಗಂಟ ತಂಡದಿಂದ ಡೊಳ್ಳಿನ ಪದಗಳು, ವಿಶಾಲಾಕ್ಷಿ ಪಾಟೀಲ ಇವರಿಂದ ಪ್ರಗತಿಪರ ಗೀತೆ, ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಂದ ಕಿರು ನಾಟಕ ಹಾಗೂ ಜಾನಪದ ನೃತ್ಯ, ಕೋಲಾಟ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.