ಕಲಬುರಗಿ: ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಕೊಡಿಸುವುದಾಗಿ 1 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ, ಮುಂಗಡವಾಗಿ 15 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಹಾಗೂ ದಲ್ಲಾಳಿಯೊಬ್ಬರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂತೋಷ ರಾಮಚಂದ್ರ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ ಪೊಲೀಸರು ದಾಳಿ ಮಾಡಿ ಎಫ್‌ಡಿಎ ಶಿಲ್ಪಾ ಹಾಗೂ ದಲ್ಲಾಳಿ ದೇವಪ್ಪನನ್ನು ಬಂಧಿಸಿದ್ದಾರೆ.
ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗೆ ನೇಮಕಾತಿ ಅರ್ಜಿ ಆಹ್ವಾನಿಸಲಾಗಿತ್ತು. ಸಹಾಯಕಿ ಹುದ್ದೆ ಕೊಡಿಸಲು ಶಿಲ್ಪಾ ಅವರು ಸಂತೋಷಗೆ 1 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಮೊದಲ ಹಂತದಲ್ಲಿ 30 ಸಾವಿರ ಲಂಚ ಪಡೆದಿದ್ದರು. ಈ ಬಗ್ಗೆ ಸಂತೋಷ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಗುರುವಾರ ನೇಮಕಾತಿ ಆದೇಶ ಪತ್ರ ನೀಡುವಾಗ ಸಂತೋಷ ಅವರಿಂದ 15 ಸಾವಿರ ಲಂಚ ಪಡೆಯುತ್ತಿದ್ದಾಗ ಶಿಲ್ಪಾ ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ. ಹಣ ಪಡೆದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.