ಕಲಬುರಗಿ: ನ.30 ರಂದು ಬೃಹತ್ ಉದ್ಯೋಗ ಮೇಳ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ 60ನೇ ವರ್ಷದ ವಜ್ರ ಮಹೋತ್ಸವದ ಅಂಗವಾಗಿ ನವೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಎಂಆರ್‌ಎಂಸಿ ಎಸ್‌ಎಸಿ ಕಟ್ಟಡದಲ್ಲಿ ‘ಉದ್ಯೋಗ ಸೇತು’ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಮೇಳದ ಪ್ರಚಾರದ ನಿಮಿತ್ಯ ಕೆಕೆಸಿಸಿಐ ತಂಡವು ಭಂಕೂರಿನ ಕರ್ನಾಟಕ ಕಾಲೇಜು, ಶಹಾಬಾದ್‌ನ ಎಚ್‌ಕೆಇ ಸಂಸ್ಥೆಯ ಮರಗೋಳ ಕಾಲೇಜು ಮತ್ತು ಗಂಗಮ್ಮ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಲಭ್ಯವಿರುವ ಅವಕಾಶಗಳ ಕುರಿತು ಮಾಹಿತಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.

10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು, ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು
ಕೌಶಲ್ಯಗಳಿಗೆ ಅನುಗುಣವಾದ ಉದ್ಯೋಗಾವಕಾಶ ತಿಳಿದುಕೊಳ್ಳಲು ಕಂಪನಿಗಳ ನೇಮಕಾತಿ ಪ್ರತಿನಿಧಿಯನ್ನು ನೇರವಾಗಿ ಭೇಟಿಯಾಗಲು ಮತ್ತು ಸಂದರ್ಶನದಲ್ಲಿ ಪಾಲ್ಗೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಮೇಳದಲ್ಲಿ ವಾಹನೋದ್ಯಮ, ಉತ್ಪಾದನಾ ವಲಯ, ದಿನಬಳಕೆ ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ), ಬ್ಯಾಂಕಿಂಗ್ ಮತ್ತು ಆತಿಥ್ಯ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಶೇಷ ಚೇತನ ಅಭ್ಯರ್ಥಿಗಳಿಗೂ ಉದ್ಯೋಗವಕಾಶ ಇರಲಿವೆ.

ಲುಲು ಗ್ರೂಪ್, ಡಾ. ರೆಡ್ಡಿಸ್, ಲೆನ್ಸ್ಕಾರ್ಟ್, ಏಷ್ಯನ್ ಪೇಂಟ್ಸ್, ಟಾಟಾ ಮಾರ್ಕೊಪೋಲೊ, ಸನ್ಸೆರಾ ಆಟೋಮೋಟಿವ್, ಕೆರ್ನ್-ಲೀಬರ್ಸ್, ಎಚ್‌ಎಚ್‌ವಿ ಥರ್ಮಲ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಡಿಸಿಬಿ ಬ್ಯಾಂಕ್, ಕ್ಯೂರ್‌ಫುಡ್ಸ್ ಮತ್ತು ಟಿಡಿ ಪವರ್ ಸಿಸ್ಟಮ್ಸ್ ಸೇರಿದಂತೆ ಅನೇಕ ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಶಹಾಬಾದ್, ಭಂಕೂರು, ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ತಮ್ಮ ಸ್ವವಿವರ ಪತ್ರ (ರೆಸ್ಯೂಮ್), ಶೈಕ್ಷಣಿಕ ಪ್ರಮಾಣ ಪತ್ರಗಳ ಪ್ರತಿಗಳು ಮತ್ತು ಗುರುತಿನ ಚೀಟಿ ತರಬೇಕು. ಆಯಾ ಕಂಪನಿಯ ಹುದ್ದೆಗಳ ಅವಶ್ಯಕತೆ ಹಾಗೂ ನೇಮಕಾತಿ ಪ್ರಕ್ರಿಯೆಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ವಜ್ರ ಮಹೋತ್ಸವದ ಅಂಗವಾಗಿ ಕೆಕೆಸಿಸಿಐ ನವೆಂಬರ್ 28, 29 ಮತ್ತು 30ರಂದು ಮೂರು ದಿನಗಳ ಕೈಗಾರಿಕಾ ಪ್ರದರ್ಶನವನ್ನೂ ಆಯೋಜಿಸಿದೆ. ‘ವೋಕಲ್ ಫಾರ್ ಲೋಕಲ್’ ಆಶಯದೊಂದಿಗೆ ವಿವಿಧ ಕೈಗಾರಿಕೆಗಳ ಉತ್ಪನ್ನಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಉದ್ದಿಮೆ ಅವಕಾಶಗಳನ್ನು ಪರಿಚಯಿಸಲಾಗುವುದು. ಉದ್ಯಮಿಗಳು, ವ್ಯಾಪಾರಿಗಳು, ನವೋದ್ಯಮಿಗಳು ಮತ್ತು ಸ್ವಂತ ಉದ್ಯಮ ಆರಂಭಿಸಲು ಆಸಕ್ತರಿಗೆ ಈ ಪ್ರದರ್ಶನವು ಉಪಯುಕ್ತ ವೇದಿಕೆಯಾಗಲಿದೆ. ಉದ್ಯೋಗಾಕಾಂಕ್ಷಿಗಳು ನವೆಂಬರ್ 30ರಂದು ಬೆಳಿಗ್ಗೆ 9 ಗಂಟೆಗೆ ‘ಉದ್ಯೋಗ ಸೇತು’ ಮೇಳದಲ್ಲಿ ಭಾಗವಹಿಸಬೇಕು ಮತ್ತು ಸಾರ್ವಜನಿಕರು ನವೆಂಬರ್ 28ರಿಂದ 30ರವರೆಗೆ ನಡೆಯಲಿರುವ ಕೈಗಾರಿಕಾ ಪ್ರದರ್ಶನಕ್ಕೆ ಭೇಟಿ ನೀಡಬೇಕು ಎಂದು ಕೆಕೆಸಿಸಿಐ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ ಇಂಗಿನಶೆಟ್ಟಿ, ಉದ್ಯೋಗ ಸೇತು ಸಮಿತಿ ಅಧ್ಯಕ್ಷ ಅನುದೀಪ್ ದಂಡೋತಿ, ಸಹ ಅಧ್ಯಕ್ಷ ಸತೀಶ್ ಎನ್ ಮುಳಗೆ, ಆಯುದ್ ಜಾಬ್ಸ್ ಸಂಸ್ಥಾಪಕ ಸದಾನಂದ ಪಟ್ಟಣಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ವಾಸುದೇವ ಚವ್ಹಾಣ್, ನೌಕಕರ ಸಂಘದ ತಾಲೂಕ ಅಧ್ಯಕ್ಷ ಶಿವಪುತ್ರ ಕರಣಿ, ಸಿಆರ್‌ಪಿ ಸತ್ಯನಾರಾಯ ವಿಶ್ವಕರ್ಮ, ಗಂಗಮ್ಮ ಶಾಲೆಯ ಮುಖ್ಯಗುರು ನಂದಾ ಹುಲಗಬಾಳಿ, ಶೃತಿ, ದಾನಯ್ಯ ಹಿರೇಮಠ ಬಸವರಾಜ ಹೊಸಕೇರಿ ಮತ್ತು ಶಿಕ್ಷಕರು ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *