ಹಳದಿ-ಕೆಂಪು ಕನ್ನಡ ಧ್ವಜಕ್ಕೆ ಮತ್ತೊಂದು ಬಣ್ಣ, ಮಧ್ಯದಲ್ಲಿ ರಾಜ್ಯ ಲಾಂಛನ: ಡಿಕೆಶಿ ಮಹತ್ವದ ಘೋಷಣೆ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜದ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಾಂಪ್ರದಾಯಿಕ ಹಳದಿ ಮತ್ತು ಕೆಂಪು ಬಣ್ಣದ ಧ್ವಜಕ್ಕೆ ಮತ್ತೊಂದು ಬಣ್ಣವನ್ನು ಸೇರಿಸುವುದರ ಜೊತೆಗೆ, ಮಧ್ಯಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರವಿವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದರು. ಕನ್ನಡ ನಾಡು, ನುಡಿ, ನೆಲ ಹಾಗೂ ಧ್ವಜದ ರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಕನ್ನಡದ ಅಸ್ಮಿತೆಯ ಸಂಕೇತವಾಗಿರುವ ಹಳದಿ-ಕೆಂಪು ಧ್ವಜಕ್ಕೆ ಅಧಿಕೃತ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ಅದರ ವಿನ್ಯಾಸದಲ್ಲಿ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ. ಧ್ವಜದಲ್ಲಿ ಮತ್ತೊಂದು ಬಣ್ಣವನ್ನು ಸೇರಿಸಿ, ಮಧ್ಯಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನವನ್ನು ಅಳವಡಿಸುವ ಪ್ರಸ್ತಾವನೆಯಿದೆ.

ಈ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುವುದು. ಬಳಿಕ ಅಂತಿಮ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಡಲಾಗುವುದು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಐಟಿ-ಬಿಟಿ ಸೇರಿದಂತೆ ಎಲ್ಲ ಖಾಸಗಿ ಕಂಪನಿಗಳಲ್ಲೂ ಕನ್ನಡ ಬಾವುಟ ಹಾರಿಸುವಂತೆ ಆದೇಶ ಹೊರಡಿಸುವ ಕುರಿತು ಸಿದ್ಧತೆ ನಡೆದಿದೆ. ವಿಧಾನಸೌಧದ ಮೇಲೆಯೂ ಕನ್ನಡ ಧ್ವಜ ಹಾರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಇತ್ತೀಚೆಗೆ ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸವನ್ನು ಸ್ಮರಿಸಿದ ಡಿಕೆ ಶಿವಕುಮಾರ್, ಕನ್ನಡ ಭಾಷೆಗೆ ಯಾವುದೆ ಗಡಿಗಳಿಲ್ಲ. ಬ್ರಿಟಿಷರ ಆಡಳಿತದ ಕಾಲದಲ್ಲಿಯೂ ಮಕ್ಕಳು ತಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದ ಇತಿಹಾಸವಿದೆ. ಕನ್ನಡಕ್ಕೆ ಸುದೀರ್ಘ ಸಾಂಸ್ಕೃತಿಕ ಪರಂಪರೆಯಿದೆ ಎಂದರು.

ನಾಡದೇವತೆ ಭುವನೇಶ್ವರಿ ತಾಯಿ ಕನ್ನಡ ಕಾಪಾಡುವ ದೇವತೆಯೆಂದು ಬಣ್ಣಿಸಿದ ಅವರು, ರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿಗೆ ಪೂಜೆ ಸಲ್ಲಿಸಿದ್ದೆವೆ. ನಮ್ಮ ಉಸಿರು, ಭಾಷೆ, ನೆಲ ಹಾಗೂ ಧ್ವಜವನ್ನು ರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ದೇಶ-ವಿದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿರುವ ಎಲ್ಲ ಕನ್ನಡಿಗರಿಗೂ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.

ಕನ್ನಡ ಧ್ವಜದ ವಿನ್ಯಾಸ, ಅದನ್ನು ಎಲ್ಲಿ ಹಾಗೂ ಹೇಗೆ ಹಾರಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸಿ, ಎಲ್ಲರ ಅಭಿಪ್ರಾಯ ಪರಿಗಣಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *