ಸುದ್ದಿ ಸಂಗ್ರಹ ಶಹಾಬಾದ್
ಶಿವನ ಧ್ಯಾನದದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಈಶ್ವರಿ ವಿವಿಯ ರಾಜಯೋಗಿನಿ ಜಗದೇವಿ ಅಕ್ಕ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಸೋಮವಾರ ಶಿವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶ ಹಬ್ಬಗಳ ನಾಡು, ಧರ್ಮಗಳ ಬೀಡಾಗಿದೆ. ದೇವರ ಧ್ಯಾನದಿಂದ ಬದುಕು ಉಜ್ವಲವಾಗುತ್ತದೆ. ಶಿವರಾತ್ರಿ ಉಪವಾಸ, ಜಾಗರಣೆ ಬದಲು ಅರಿಷಡ್ವರ್ಗಗಳಿಂದ ದೂರವಾಗುವ ಸಂಕಲ್ಪ ಮಾಡಬೇಕು, ಜಗತ್ತಿಗೆ ಭಗವಂತ ಒಬ್ಬನೆ ಆಗಿದದು ಆತನನ್ನು ಮನಸ್ಸು ಮತ್ತು ಬುದ್ಧಿಯಿಂದ ಭಗವಂತನ ಸಾಮಿಪ್ಯ ಸಾಧಿಸುವುದೆ ಉಪವಾಸವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಮಾತನಾಡಿ, ಮನೆಯಲ್ಲಿ ಸದಾ ಸಕಾರಾತ್ಮಕ ವಾತಾವರಣ ನೆಲೆಸಬೇಕೆಂದರೆ ನಮ್ಮ ಮನದಲ್ಲಿ ತಾಳ್ಮೆ,
ಸಹನೆಯಿದ್ದಾಗ ಮಾತ್ರ ಸಾಧ್ಯ. ಆಧ್ಯಾತ್ಮಿಕ ಕೇಂದ್ರಗಳು ಸಂಸ್ಕಾರ ಧಾರೆ ಎರೆಯುವ ಮೂಲಕ ಮನುಷ್ಯನನ್ನು ರೂಪಿಸುವ ಕೆಲಸ ಮಾಡುತ್ತವೆ. ಶಿಕ್ಷಣ ಮತ್ತು ಸಂಸ್ಕಾರ ಒಂದಾಗಿದ್ದರೆ ಬದುಕು ಸುಂದರವಾಗಿರುತ್ತದೆ ಮಾನವರಲ್ಲಿ ದುರಾಸೆ ಜಾಸ್ತಿಯಾಗುತ್ತಿದೆ, ಆಸೆಯೆ ದುಃಖಕ್ಕೆ ಮೂಲ, ಹೀಗಾಗಿ ಮನುಷ್ಯ ಆಸೆಗಳಿಗೆ ಜೋತು ಬಿದ್ದು ಮಾನವೀಯತೆ ಮರೆತು ಸ್ವಾರ್ಥದ ಬದುಕು ನಡೆಸದೆ ಸಾರ್ಥಕ ಬದುಕು ನಡೆಸಬೇಕು, ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಸಂತೋಷಿ ನರೇಂದ್ರ ವರ್ಮಾ, ಡಾ.ಶಕುಂತಲಾ ಬನ್ನಾಳೆ, ಸಿಸ್ಟರ್ ಲೋವಿಟಾ, ಡಾ.ಜ್ಯೋತ್ಸಾ, ಮಾತನಾಡಿದರು.
ಕಾರ್ಯಕ್ರಮವನ್ನು ರಾಜಯೋಗಿನಿ ಕಲಾವತಿ ಅಕ್ಕಾ ನಿರೂಪಿಸಿದರು, ರಾಜಯೋಗಿನಿ ಜಯಶ್ರೀ ಅಕ್ಕಾ ಸ್ವಾಗತಿಸಿದರು,
ಕಾರ್ಯಕ್ರಮದ ನಂತರ ಭೂಮಿಕಾ, ರಷ್ಮಿ, ನೃತ್ಯ ಪ್ರದರ್ಶನ ಮಾಡಿದರು.