ಸುದ್ದಿ ಸಂಗ್ರಹ ನವದೆಹಲಿ
2,000 ರೂ. ವರೆಗೆ ನಡೆಯುವ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ RuPay (ರೂಪೇ) ಡೆಬಿಟ್ ಕಾರ್ಡ್ ಮೂಲಕ ನಡೆಯುವ ಪಾವತಿಗಳಿಗೆ ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೆ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ, ನಿಗದಿಪಡಿಸಿರುವ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನ ಬಳಸಿಕೊಂಡು ಪಾವತಿ ಮಾಡುವ ಅಥವಾ ಸ್ವೀಕರಿಸುವ ಯಾವುದೆ ವ್ಯಕ್ತಿಯಿಂದ ಬ್ಯಾಂಕ್ ಅಥವಾ ಸಿಸ್ಟಂ ಪ್ರೊವೈಡರ್ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೆ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2,000ಕ್ಕಿಂತ ಹೆಚ್ಚಿನ ವಹಿವಾಟುಗಳ ಪ್ರಮಾಣ ಎಷ್ಟು ?
2025-26ನೇ ಹಣಕಾಸು ವರ್ಷದಲ್ಲಿ ನಡೆದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ಯುಪಿಐ ಪಾವತಿಗಳ ಪೈಕಿ ಕೇವಲ 4 ಪ್ರತಿಶತ ವಹಿವಾಟುಗಳು ಮಾತ್ರ 2 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ್ದಾಗಿದ್ದವು. ಆದರೆ ಶೇ.4ರಷ್ಟು ವಹಿವಾಟುಗಳು ಒಟ್ಟು ಯುಪಿಐ ಪಾವತಿ ಮೌಲ್ಯದ ಸುಮಾರು ಮೂರನೇ ಎರಡರಷ್ಟು ಪಾಲನ್ನು ಹೊಂದಿದ್ದವು.
2025-26ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿ 24,000 ಕೋಟಿಗೂ ಅಧಿಕ ಯುಪಿಐ ವಹಿವಾಟುಗಳು ನಡೆದಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 314 ಲಕ್ಷ ಕೋಟಿ ಆಗಿದೆ ಎಂದು ವರದಿಗಳು ತಿಳಿಸಿವೆ.
ಶುಲ್ಕ ವಿಧಿಸಲು ಅವಕಾಶ ಕಲ್ಪಿಸಿದ್ದ ತಿದ್ದುಪಡಿ
ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾದ ತೆರಿಗೆ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಮೂಲಕ ʻPayment and Settlement Systems Act, 2007ರ (ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007) ಸೆಕ್ಷನ್ 10Aಗೆ ತಿದ್ದುಪಡಿ ಮಾಡಲಾಗಿತ್ತು.
ಈ ತಿದ್ದುಪಡಿಯಿಂದ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 269SU ಅಡಿಯಲ್ಲಿ ಎಲೆಕ್ಟ್ರಾನಿಕ್ ಪಾವತಿಗಳಿಗೆ ಬ್ಯಾಂಕ್ ಶುಲ್ಕ ವಿಧಿಸುವುದರಿಂದ ಇದ್ದ ವಿನಾಯಿತಿಯನ್ನು ತೆಗೆದುಹಾಕಲಾಗಿತ್ತು. ಸೆಕ್ಷನ್ 269SU ಅನ್ವಯ 50 ಕೋಟಿ ರೂ.ಗಿಂತಲೂ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ನಿರ್ದಿಷ್ಟ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳನ್ನ ಒದಗಿಸುವುದು ಕಡ್ಡಾಯವಾಗಿತ್ತು.