ಸುದ್ದಿ ಸಂಗ್ರಹ ಕಲಬುರಗಿ
ಮಳೆಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದರು ಕೂಡ ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಖಂಡನೀಯ ಎಂದು ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಜನರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ, ಜಿಲ್ಲೆಯಲ್ಲಿ ಒಬ್ಬರು ಸಂಸದರು, 9 ಜನ ಶಾಸಕರು ಇದ್ದಾರೆ, ಅದರಲ್ಲೂ ವಿಶೇಷವಾಗಿ 3 ಜನ ಸಚಿವರಿದ್ದಾರೆ, ಗೃಹ ಸಚಿವರು ಕೂಡ ನಮ್ಮ ಜಿಲ್ಲೆಯವರೆ ಆಗಿದ್ದು, ಇಷ್ಟೆಲ್ಲಾ ಪ್ರಭಾವಿ ರಾಜಕೀಯ ನಾಯಕರಿದ್ದರೂ ಕೂಡ ರೈತಪರ ಧ್ವನಿ ಎತ್ತಿ ಸರ್ಕಾರಕ್ಕೆ ಬರಪೀಡಿತ ಜಿಲ್ಲೆ ಎಂದು ಹೇಳದಿರುವದು ದುರ್ದೈವದ ಸಂಗತಿಯಾಗಿದೆ.
ಜಿಲ್ಲೆಯಲ್ಲಿ ಇಷ್ಟೊಂದು ರಾಜಕೀಯ ಪ್ರಾಬಲ್ಯವಿರುವ ನಾಯಕರಿದ್ದರು ಕೂಡ ಕಲಬುರಗಿಗೆ ಬರಬೇಕಾದ ನ್ಯಾಯಬದ್ಧ ಪರಿಹಾರ ತರಲು ಸಾಧ್ಯವಾಗಿಲ್ಲ. ಇದು ಜನಪ್ರತಿನಿಧಿಗಳ ಬೇಜವಾಬ್ದಾರಿತನ ತೋರಿಸುತ್ತದೆ.
ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿವೆ, ಅಂತರ್ಜಲದ ಮಟ್ಟ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲೂ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸದಿರುವುದು ಇಲ್ಲಿನ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಉನ್ನತ ಸ್ಥಾನಗಳಲ್ಲಿ ಜಿಲ್ಲೆಯ ನಾಯಕರಿದ್ದರೂ ಕಲಬುರಗಿಗೆ ನಿರಂತರ ಅನ್ಯಾಯವಾಗುತ್ತಿರುವುದು ಯಾಕೆ ? ಎಂಬುದು ಜಿಲ್ಲೆಯ ಜನತೆಯನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಬರಪೀಡಿತ ಜಿಲ್ಲೆಗಳ ಆಯ್ಕೆಯ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರ ಕೂಡಲೆ ಮರುಪರಿಶೀಲಿಸಬೇಕು. ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶ ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಬೆಳೆಹಾನಿ ಪರಿಹಾರ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದ್ದಾರೆ.