1 ಕೋಟಿ ಮತದಾರರ ಡಿಲೀಟ್‌ ಆತಂಕ: ಕೇಂದ್ರ ಚುನಾವಣಾ ಆಯೋಗಕ್ಕೆ CM ಡಿ.ಕೆ ಶಿವಕುಮಾರ್ ಪತ್ರ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿಗೂ ಅಧಿಕ ಮತದಾರರ ಹೆಸರುಗಳು ರದ್ದಾಗುವ ಅಥವಾ ಕೈಬಿಡಲ್ಪಡುವ ಭೀತಿ ಎದುರಾಗಿದ್ದು, ಈ ಸಂಬಂಧ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.

ಯಾವುದೆ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿರುವ ಅವರು 4 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದಾರೆ. ಸುಮಾರು 1.08 ಕೋಟಿ ಜನರನ್ನು (ಅಂದರೆ ಪ್ರತಿ ಐವರಲ್ಲಿ ಒಬ್ಬರನ್ನು) ಗೈರುಹಾಜರಿ, ಸ್ಥಳಾಂತರ, ಮೃತ, ನಕಲಿ ಮತ್ತು ಇತರೆ ವರ್ಗಕ್ಕೆ ಸೇರಿಸಲಾಗಿದೆ. ಕೇವಲ ಬೆಂಗಳೂರು ನಗರ ವ್ಯಾಪ್ತಿಯಲ್ಲೆ ಬರೋಬ್ಬರಿ 46.88 ಲಕ್ಷ ಮತದಾರರು ASDDO ಪಟ್ಟಿಯಲ್ಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ವಿವರಿಸಿದ್ದಾರೆ.

43.8 ಲಕ್ಷ ಜನರಿಗೆ ನೋಟಿಸ್ ಭೀತಿ
‘ತಾರ್ಕಿಕ ವ್ಯತ್ಯಾಸಗಳು’ ಅಥವಾ 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಕಾರಣಕ್ಕಾಗಿ ರಾಜ್ಯದಲ್ಲಿ ಸುಮಾರು 43.8 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಸೂಕ್ತ ದಾಖಲೆಗಳನ್ನು ನೀಡಿ ಮರುಸೇರ್ಪಡೆಗೆ ಅರ್ಜಿ ಸಲ್ಲಿಸದಿದ್ದರೆ ರಾಜ್ಯದ ಸುಮಾರು 1.5 ಕೋಟಿ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲ್ಪಡುವ ಅಪಾಯವಿದೆ ಎಂದು ಸಿಎಂ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 4 ಪ್ರಮುಖ ಬೇಡಿಕೆಗಳೇನು ?

  • ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ಅರ್ಹ ಮತದಾರರು ತಮ್ಮ ಸ್ಥಿತಿಯನ್ನು ಪರಿಶೀಲಿಸಿ, ಫಾರ್ಮ್-6 ಮೂಲಕ ಮರುಸೇರ್ಪಡೆಗೆ ಅರ್ಜಿ ಸಲ್ಲಿಸಲು ಪ್ರಸ್ತುತ ಇರುವ ಕಾಲಾವಕಾಶ ವಿಸ್ತರಿಸಬೇಕು.
  • ಗ್ರಾಮೀಣ ಭಾಗಗಳಲ್ಲಿ ‘ಗ್ರಾಮ ಸಭೆ’ ಮತ್ತು ನಗರ ಪ್ರದೇಶಗಳಲ್ಲಿ ‘ವಾರ್ಡ್ ಸಮಿತಿ’ ಸಭೆ ಕರೆದು, ಕರಡು ಮತದಾರರ ಪಟ್ಟಿಯನ್ನು ಬಹಿರಂಗವಾಗಿ ಓದಿ ಹೇಳಬೇಕು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ತಪ್ಪುಗಳು ಮತ್ತು ಬಿಟ್ಟುಹೋದ ಹೆಸರುಗಳನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು.
  • ತಾರ್ಕಿಕ ವ್ಯತ್ಯಾಸಗಳು ಹಾಗೂ 2002ರ ಪಟ್ಟಿಯ ಲಿಂಕ್ ಇಲ್ಲದ ಕಾರಣಕ್ಕೆ ನೋಟಿಸ್ ಪಡೆಯುವ ಮತದಾರರಿಗೆ ಉತ್ತರಿಸಲು ಕೇವಲ 1 ವಾರದ ಬದಲು ಕನಿಷ್ಠ 3 ರಿಂದ 4 ವಾರಗಳ ಕಾಲಾವಕಾಶ ನೀಡಬೇಕು. ಇದರಿಂದ ಬಡವರು, ಕಾರ್ಮಿಕರು, ವಲಸಿಗರು ಮತ್ತು ವೃದ್ಧರಿಗೆ ಅಗತ್ಯ ದಾಖಲೆ ಒದಗಿಸಲು ಕಡಿಮೆ ಸಮಯ ನೀಡುವುದು ಅನ್ಯಾಯವಾಗುತ್ತದೆ.
  • ಲಕ್ಷಾಂತರ ಆಕ್ಷೇಪಣೆಗಳು ಮತ್ತು ಅರ್ಜಿಗಳನ್ನು ಪರಿಶೀಲಿಸಲು ಸೀಮಿತ ಸಿಬ್ಬಂದಿಯಿಂದ ಅಸಾಧ್ಯ. ಕೆಲಸದ ಒತ್ತಡದಿಂದ ಅರ್ಹ ಮತದಾರರು ಕೈಬಿಟ್ಟುಹೋಗುವುದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗಳನ್ನು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳನ್ನು ನೇಮಿಸಬೇಕು.

ಸ್ಥಳಾಂತರ ಅಥವಾ ಬಡತನ ಮತದಾನದ ಹಕ್ಕು ಕಸಿಯಬಾರದು
“ಉದ್ಯೋಗ, ಶಿಕ್ಷಣ, ಮದುವೆ ಅಥವಾ ಜೀವನೋಪಾಯಕ್ಕಾಗಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಸಹಜ. ಕೇವಲ ಸ್ಥಳ ಬದಲಾವಣೆ, ಬಡತನ, ಮಾಹಿತಿಯ ಕೊರತೆ ಅಥವಾ ದಾಖಲೆಗಳ ಅಲಭ್ಯತೆಯ ಕಾರಣಕ್ಕಾಗಿ ನಾಗರಿಕರ ಮೂಲಭೂತ ಹಕ್ಕಾದ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು. ನಿಖರವಾದ ಹಾಗೂ ಅರ್ಹ ಮತದಾರರನ್ನು ಒಳಗೊಂಡ ಪಟ್ಟಿಯನ್ನು ರೂಪಿಸಲು ಕರ್ನಾಟಕ ಸರ್ಕಾರ ಚುನಾವಣಾ ಆಯೋಗಕ್ಕೆ ಎಲ್ಲಾ ರೀತಿಯ ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ಬೆಂಬಲ ನೀಡಲು ಸಿದ್ಧವಿದೆ,” ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

Leave a Reply

Your email address will not be published. Required fields are marked *