ಚಿತ್ತಾಪುರದಲ್ಲಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ವಂಚನೆ, ಮಹಿಳೆಗೆ ಆಭರಣ ವಾಪಸ್

ತಾಲೂಕು

ಸುದ್ದಿ ಸಂಗ್ರಹ ಚಿತ್ತಾಪುರ
ಡಿ.ಕೆ ಶಿವಕುಮಾರ್‌ ಅವರು ಆಧಾರ್ ಕಾರ್ಡ್ ಪರಿಗಣಿಸಿ ಸಾಲ ಕೊಡುತ್ತಿದ್ದಾರೆಂದು ನಂಬಿಸಿ ಮಹಿಳೆಯೊಬ್ಬರಿಂದ 10 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ್ದ ವಂಚಕರನ್ನು ಚಿತ್ತಾಪುರ ಪೊಲೀಸರು 8 ತಿಂಗಳ ನಂತರ ಬಂಧಿಸಿದ್ದಾರೆ.

ಆರೋಪಿತರನ್ನು ಚಿತ್ತಾಪುರದ ಮಹಮ್ಮದ್ ಮದರಸಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಜನವರಿ 7 ರಂದು ಅಲ್ಲೂರ್(ಬಿ) ಗ್ರಾಮದ ಶರಣಮ್ಮ ಅವರು ಚಿತ್ತಾಪುರ ಬಸ್ ನಿಲ್ದಾಣದಲ್ಲಿ ಕೂತಿದ್ದರು. ಈ ವೇಳೆ ಮಹಿಳೆಯರಿಗೆ ಆಧಾರ್ ಕಾರ್ಡ್ ನೋಡಿ ಸಾಲ ಕೊಡುತ್ತಿದ್ದಾರೆಂದು ನಂಬಿಸಿದ್ದರು. ಆಗ ಶರಣಮ್ಮ ತನಗೆ ತುರ್ತಾಗಿ 10 ಸಾವಿರ ಸಾಲ ಬೇಕೆಂದು ಅಪರಿಚಿತರ ಬಳಿ ಸಹಾಯ ಕೇಳಿದ್ದರು.

ಬಳಿಕ ವಂಚಕರು ಶರಣಮ್ಮರ ಆಧಾರ್ ಕಾರ್ಡ್ ಪಡೆದು, ಸಾಲ ಪಡೆಯುವಾಗ ಮೈಮೇಲೆ ಬಂಗಾರದ ಆಭರಣ ಇದ್ದರೆ, ಸಮಸ್ಯೆಯಾಗುತ್ತದೆ, ಅವುಗಳನ್ನು ಕಳಚಿ ನಮ್ಮ ಬಳಿ ಕೊಡಿ ಎಂದು ನಂಬಿಸಿದ್ದರು. ಇದನ್ನು ನಂಬಿ ಶರಣಮ್ಮ ಆಭರಣಗಳನ್ನು ತೆಗೆದು ಅವರ ಬಳಿ ಕೊಟ್ಟಿದ್ದರು. ಆಗ ಆಧಾರ್ ಕಾರ್ಡ್ ಝರಾಕ್ಸ್ ಮಾಡಿಸುವ ನೆಪದಲ್ಲಿ ಬಂಗಾರ ದೋಚಿಕೊಂಡು ವಂಚಕರು ಅಲ್ಲಿಂದ ಕಾಲ್ಕಿತ್ತಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಂತರ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ವಶಪಡಿಸಿಕೊಂಡಿರುವ ಆಭರಣಗಳನ್ನು ಶರಣಮ್ಮ ಅವರಿಗೆ ಹಸ್ತಾಂತರಿಸಿದ್ದಾರೆ. ಪಿಎಸ್ಐ ಮಂಜುನಾಥರೆಡ್ಡಿ ಮಾರ್ಗದರ್ಶನದಲ್ಲಿ ಸಿಬ್ಬಂದಿ ಅಜರುದ್ದೀನ್, ಅಯ್ಯಣ್ಣ, ಅನಿಲಕುಮಾರ್ ತನಿಖಾ ತಂಡದಲ್ಲಿದ್ದರು.

Leave a Reply

Your email address will not be published. Required fields are marked *