ಆ.2ಕ್ಕೆ ಕಾನ್‌ಸ್ಟೇಬಲ್‌ ಪರೀಕ್ಷೆ: 3,991 ಹುದ್ದೆಗೆ 4.54 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಒಟ್ಟು 3,991 ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಭದ್ರತಾ ಕ್ರಮ ಕೈಗೊಂಡಿದೆ.

ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಯನ್ನು ಭಾರಿ ಸಂಖ್ಯೆ ಅಂದರೆ 4,54,532 ಜನರು ಬರೆಯುತ್ತಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಉಳಿಕ ಮೂಲ ವೃಂದದ 3,395 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಉಳಿಕ ಮೂಲ ವೃಂದದ 3,77,861 ಮತ್ತು ಕಲ್ಯಾಣ ಕರ್ನಾಟಕ ವೃಂದದ 76,684 ಜನರು ಅರ್ಜಿ ಸಲ್ಲಿಸಿದ್ದು, ಅಷ್ಟೂ ಜನರಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಆ.2ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ರಾಜ್ಯದ ಎಲ್ಲರಿಗೂ ಹಾಗೂ ಸಂಜೆ 4 ರಿಂದ 5.30ರವರೆಗೆ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಹೇಳಿದ್ದಾರೆ.

ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ಬಾರಿಯೂ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗುತ್ತಿದೆ. ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದೊಳಗೆ‌ ಬಿಡಲಾಗುತ್ತದೆ. ಪರೀಕ್ಷಾ ಕೇಂದ್ರ ಮತ್ತು ಕೊಠಡಿಯಲ್ಲಿ ಸಿಸಿಟಿವಿ ಕಣ್ಗಾವಲು ಇರುತ್ತದೆ. ತಪಾಸಣೆ ಮತ್ತು ಸಿಸಿಟಿವಿ ಕಣ್ಗಾವಲಿನ ಜವಾಬ್ದಾರಿಯನ್ನು ಆಯಾ ಜಿಲ್ಲಾ ಪೊಲೀಸರು ನಿರ್ವಹಣೆ ಮಾಡಲಿದ್ದಾರೆ. ಒಟ್ಟಾರೆ ಪರೀಕ್ಷಾ ಮೇಲ್ವಿಚಾರಣೆಯನ್ನು ಆಯಾ ಜಿಲ್ಲಾಧಿಕಾರಿಗಳೆ ನೋಡಲಿದ್ದಾರೆ ಎಂದು ವಿವರಿಸಿದ್ದಾರೆ.

ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ‌ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸಲು ಪರೀಕ್ಷಾ ಕೇಂದ್ರಗಳ ಸುತ್ತ ಜಾಮರ್ ಅಳವಡಿಸಲಾಗಿದೆ‌. ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ಮೇಲೆ ತೀವ್ರ ನಿಗಾ‌ ಇಡಲು ವೆಬ್ ಕಾಸ್ಟಿಂಗ್ ಮಾಡುತ್ತಿದ್ದು, ಅದನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ ಪ್ರಾಧಿಕಾರದ ಕಚೇರಿಯಲ್ಲಿ ಸ್ಥಾಪಿಸಿರುವ ಕಮಾಂಡ್ ಸೆಂಟರ್ ನಿಂದಲೂ ನಿರ್ವಹಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮೊಬೈಲ್, ಕ್ಯಾಮರಾ, ಬ್ಲೂಟೂತ್ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಗೆ ನಿಷೇಧ ಇದೆ. ಯಾವುದೆ ಕೈಗಡಿಯಾರ ಕೂಡ ಧರಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಶ್ರವಣ ದೋಷ ಇದ್ದು, ವಿಶೇಷ ಶ್ರವಣ ಸಾಧನ ಬಳಸುವ ಅಭ್ಯರ್ಥಿಗಳು ಎರಡು ಗಂಟೆ ಮುಂಚೆಯೇ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹವರು ಯುಡಿಐಡಿ ಕಾರ್ಡ್ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಕೂಡ ತಂದಿರಬೇಕು ಎಂದು ಹೇಳಿದರು.

ವಸ್ತ್ರ ಸಂಹಿತೆ: ಕಿವಿ, ತಲೆ ಮತ್ತು ಮುಖ ಮುಚ್ಚುವಂತಹ ಯಾವುದೆ ಉಡುಪುಗಳನ್ನು ಧರಿಸಿಕೊಂಡು ಬರುವಂತಿಲ್ಲ. ಉದ್ದ ತೋಳಿನ ಡ್ರೆಸ್’ಗೂ ನಿಷೇಧ ಇದೆ. ಮೂಗುತಿ, ಮಂಗಳ ಸೂತ್ರ ಹೊರತುಪಡಿಸಿ ಉಳಿದ ಯಾವುದೆ ಆಭರಣ/ಲೋಹದ ವಸ್ತುಗಳನ್ನು ಧರಿಸುವಂತಿಲ್ಲ. ಶೂ ಧರಿಸುವಂತಿಲ್ಲ. ಬದಲಿಗೆ ಚಪ್ಪಲಿ, ಕಡಿಮೆ ಹಿಮ್ಮಡಿ ಇರುವ ಸ್ಯಾಂಡಲ್ ಧರಿಸಬಹುದು ಎಂದು ವಿವರಿಸಿದ್ದಾನೆ.

ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಎರಡು ಗಂಟೆ ಮುಂಚೆ ಬಂದು ತಪಾಸಣೆಗೆ ಒಳಗಾಗಬೇಕಾಗುತ್ತದೆ. ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ವಿವರಿಸಿದರು.

ಓಎಂಆರ್ ಸ್ಕ್ಯಾನಿಂಗ್ ಗೆ ವಿಶೇಷ ವ್ಯವಸ್ಥೆ
ಇದೆ ಮೊದಲ ಬಾರಿಗೆ ಓಎಂಆರ್ ಪ್ರತಿಗಳ ಸ್ಕ್ಯಾನಿಂಗ್ ಅನ್ನು ಬೆಂಗಳೂರು ಅಲ್ಲದೆ 6 ಕಡೆ ಮಾಡಲಾಗುತ್ತಿದೆ. ಪರೀಕ್ಷೆ ಮುಗಿದ ಕೂಡಲೆ ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ, ರಾಯಚೂರು ನಗರಗಳಲ್ಲಿ ಓಎಂಆರ್ ಪ್ರತಿ ಸ್ಕ್ಯಾನ್ ಮಾಡಿ, ವೆಬ್ ಸೈಟ್’ಗೆ ಅಪ್‌ಲೋಡ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಸನ್ನ ತಿಳಿಸಿದರು.

Leave a Reply

Your email address will not be published. Required fields are marked *