ಸುದ್ದಿ ಸಂಗ್ರಹ ನವದೆಹಲಿ
ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ನಾಗರಿಕ ಹೂಡಿಕೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸುವ ಮುನ್ನ ಪುದುಚೇರಿಯ ಮಾರ್ಷಲ್ ಆರ್ಟ್ಸ್ ಸಾಧಕ ಕೆ ಪಜನಿವೇಲ್ ಅವರು ಪ್ರಧಾನಿ ಮೋದಿ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲೆ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ರಂಗಗಳ ಗಣ್ಯರನ್ನು ಗೌರವಿಸಲಾಯಿತು. ಈ ವೇಳೆ ಕರ್ನಾಟಕದ ಡಾ. ಆರ್ ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ, ಮಂಡ್ಯದ ಎಂ. ಅಂಕೇಗೌಡ ಹಾಗೂ ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ ಸುಶೀಲಮ್ಮ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಮತ್ತು ಸಮಾಜದ ತಳಮಟ್ಟದಲ್ಲಿ ನಿಃಸ್ವಾರ್ಥ ಸೇವೆ ಸಲ್ಲಿಸಿದ ಅನೇಕ ಮಹನೀಯರು ಈ ಬಾರಿಯ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾದರು.
ಪ್ರಸಕ್ತ ಸಾಲಿನ ಪ್ರಶಸ್ತಿ ವಿಜೇತರಲ್ಲಿ ಹಿಂದಿ ಚಿತ್ರರಂಗದ ದಂತಕತೆ ದಿವಂಗತ ನಟ ಧರ್ಮೇಂದ್ರ ಅವರಿಗೆ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುನ್ನತ ಕೊಡುಗೆಗಾಗಿ ದೇಶದ ಎರಡನೇ ಅತಿ ದೊಡ್ಡ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಅವರ ಪರವಾಗಿ ಅವರ ಪತ್ನಿ ಹೇಮಾಮಾಲಿನಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೋದಿಗೆ ಸಾಷ್ಟಾಂಗ ನಮಸ್ಕಾರ
ಪದ್ಮಪ್ರಶಸ್ತಿ ಸ್ವೀಕರಿಸುವ ಮುನ್ನ ವೇದಿಕೆಯ ಕೆಳಗೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧಕರು ನಮಸ್ಕರಿಸಿ ತೆರಳುವ ದೃಶ್ಯಗಳು ಪ್ರತಿವರ್ಷವೂ ಸಾಮಾನ್ಯವಾಗಿ ಕಾಣುತ್ತೆವೆ. ಆದರೆ ಸಾಂಪ್ರದಾಯಿಕ ಸಮರ ಕಲೆಗೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪುರಸ್ಕಾರ ಪಡೆದ ಪುದುಚೇರಿಯ ಸಿಲಂಬಂ ಪ್ರತಿಪಾದಕ ಕೆ ಪಜನಿವೇಲ್ ಅವರು ಪ್ರಧಾನಿ ಮೋದಿ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು. ತಕ್ಷಣವೇ ಪ್ರಧಾನಿ ಕುಳಿತಲ್ಲಿಂದ ಎದ್ದು ಅವರ ಕೈ ಹಿಡಿದು ಪ್ರತಿ ನಮಸ್ಕರಿಸಿದರು. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೀಡಾಗಿದೆ. ಕೆಲವರು ಇದು ಪ್ರಧಾನಿಗೆ ಸಲ್ಲಿಸಿದ ಗೌರವ ಎಂದರೆ, ಮತ್ತೆ ಕೆಲವರು ಇದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಎಕ್ಸ್ ಪೋಸ್ಟ್
ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಎಕ್ಸ್ ಪೋಸ್ಟ್ ಮಾಡಿದ್ದು ಕರ್ನಾಟಕದ ಪದ್ಮ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲ ಸಾಧಕರೊಂದಿಗೆ ಕನ್ನಡ ನೆಲದ ಹೆಮ್ಮೆಯ ಸಾಧಕರಾದ ಡಾ. ಆರ್ ಶತಾವಧಾನಿ ಗಣೇಶ್ ಅವರು, ಮಂಡ್ಯದ ಶ್ರೀ ಎಂ ಅಂಕೇಗೌಡರು ಮತ್ತು ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ ಸುಶೀಲಮ್ಮ ಅವರು ಕೂಡ ಉನ್ನತ ಗೌರವಕ್ಕೆ ಪಾತ್ರರಾಗಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿತು. ರಾಷ್ಟ್ರದ ಎಲ್ಲಾ ಭಾಗಗಳಿಂದ ಆಗಮಿಸಿ ಪದ್ಮ ಪ್ರಶಸ್ತಿ ಸ್ವೀಕರಿಸಿದ ಸಾಧಕರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಬರೆದಿದ್ದಾರೆ.
‘ಪದ್ಮಭೂಷಣ’ ಗೌರವ ಸ್ವೀಕರಿಸಿದ ಹೆಮ್ಮೆಯ ಕನ್ನಡಿಗರು, ವಿದ್ವಾಂಸರು, ಲೇಖಕರು ಆಗಿರುವ ಡಾ. ಆರ್ ಶತಾವಧಾನಿ ಗಣೇಶ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಅರ್ಪಿಸುತ್ತೆನೆ. ಕನ್ನಡ ನೆಲದ ಮೂಲಕ ಭಾರತೀಯ ಅನನ್ಯತೆ, ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಶ್ರೀಯುತರ ಕೊಡುಗೆ ಮತ್ತು ಜ್ಞಾನಕ್ಕಾಗಿ ಕನ್ನಡಿಗರು ಎಲ್ಲರೂ ಆಭಾರಿಯಾಗಿರಬೇಕು ಎಂದು ಹೇಳಲು ಬಯಸುತ್ತೆನೆ.’ ಎಂದು ತಿಳಿಸಿದ್ದಾರೆ.