ಸುದ್ದಿ ಸಂಗ್ರಹ ಶಹಾಬಾದ್
ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಬೆಳಗ್ಗೆಯಿಂದ ರಸ್ತೆಯ ಮಧ್ಯೆ ಟೆಂಟ್ ಹಾಕಿಕೊಂಡು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಶಹಾಬಾದ್ನಿಂದ ಜೇವರ್ಗಿಗೆ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ದಿನನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ನಿರ್ಲಕ್ಷಿಸಿದ್ದಾರೆ. ರಸ್ತೆ ನಿರ್ಮಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಿಂದ ರಸ್ತೆ ಮಧ್ಯೆ ಟೆಂಟ್ ಹಾಕಿಕೊಂಡು ಭಜನೆ ಮಾಡುತ್ತ, ಧರಣಿ ಕುಳಿತು, ರಸ್ತೆ ಮಧ್ಯೆ ಟೈರ್, ಕಟ್ಟಿಗೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ನೀಲಪ್ರಭ ಬಬಲಾದ, ಪಿಐ ಪರಶುರಾಮ ವನಂಜಕರ ಅವರು ಲೋಕೋಪಯೊಗಿ ಇಲಾಖೆಯ ಜೆಇ ಅವರೊಂದಿಗೆ ಭೇಟಿ ನೀಡಿ, ರಸ್ತೆ ಕಾಮಗಾರಿ ಕುರಿತು ಕಡತ ಪ್ರಗತಿಯಲ್ಲಿದ್ದು, ಜಿಲ್ಲಾಧಿಕಾರಿಗಳು ಹೊಸದಾಗಿ ಬಂದಿದ್ದರಿಂದ ಗ್ರಾಮಸ್ಥರ ನಿಯೋಗ ಬಂದರೆ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿಸುತ್ತೆವೆ ಎಂದರು.
ತಹಸೀಲ್ದಾರ್ ಅವರ ಮನವಿಗೆ ಒಪ್ಪದ ಪ್ರತಿಭಟನಕಾರರು, ಈ ಹಿಂದೆ ತಮಗೂ, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದು, ಆವಾಗ ಜಿಲ್ಲಾಧಿಕಾರಿಯವರು 15 ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಿ, ಆರು ತಿಂಗಳಾದರು ಕಾಮಗಾರಿ ಪ್ರಾರಂಭಿಸಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಭರವಸೆ ನೀಡಿದರಷ್ಟೆ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೆವೆ ಎಂದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಬಸವರಾಜ ಗೊಳೇದ, ಬಸವರಾಜ ಮದ್ರಕಿ, ಬೆಳ್ಳಪ್ಪ ಖಣದಾಳ, ಮಲ್ಲಣ್ಣ ಮರತೂರ, ನಾಗೇಂದ್ರ ಹುಗ್ಗಿ, ಭೀಮರಾವ ಹೂಗಾರ, ಸಿದ್ದು ಸಜ್ಜನ, ಅಲ್ಲಮಪ್ರಭು ಮಂಗಳೂರ, ಮರಲಿಂಗ ಹುಗ್ಗಿ, ಅಲ್ಲಾಬಕ್ಷ್ ಜಮಾದಾರ, ಮಂಜುನಾಥ ಇಟಗಿ, ಅಂಬರೀಷ ಕಲಬುರಗಿ, ಮಹೇಶ ಬಂದಳ್ಳಿ, ಮಲ್ಲು ಗೊಳೇದ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಸ್ತೆ ತಡೆಯಿಂದಾಗಿ ವಾಡಿ, ಮಳಖೇಡ, ಸೇಡಂದಿಂದ ಜೇವರ್ಗಿ ಮಾರ್ಗವಾಗಿ ಹೋಗುವ ವಾಹನಗಳನ್ನು ಶಹಾಬಾದ್ ಕಲಬುರಗಿ ಮಾರ್ಗವಾಗಿ, ಜೇವರ್ಗಿಯಿಂದ ಶಹಾಬಾದ್ ಮಾರ್ಗವಾಗಿ ಬರುವ ವಾಹನಗಳನ್ನು ಕಲಬುರಗಿ ಮಾರ್ಗವಾಗಿ ಕಳುಹಿಸಲಾಯಿತು.