ಸೇಡಂ: ತಾಲೂಕಿನ ಐತಿಹಾಸಿಕ ಮೇದಕ ಗ್ರಾಮವು ಕಲ್ಯಾಣ ಕರ್ನಾಟಕ ಬೇಲೂರು ಮತ್ತು ಹಳೇಬೀಡು ಆಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತವ್ಯಕ್ತಪಡಿಸಿದರು.
ತಾಲೂಕಿನ ಮೇದಕ ಗ್ರಾಮದ ಭೂಥನಾತ ಮತ್ತು ಚನ್ನಕೇಶವ ದೇವಾಲಯದ ಪರಿಸರದಲ್ಲಿ ಕಲಬುರಗಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಐತಿಹಾಸಿಕ ದೇವಾಲಯಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇಡಂ ತಾಲೂಕಿನ ವಿವಿಧ ಗ್ರಾಮಗಳು ಸಾವಿರಾರು ವರ್ಷಗಳ ಹಿಂದೆ ಕನ್ನಡ ನಾಡಿನ ಕೀರ್ತಿ ಹೆಚ್ಚಿಸಿವೆ. ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಕನ್ನಡದ ಉಪಲಬ್ದ ಗ್ರಂಥ ಕವಿರಾಜಮಾರ್ಗ ಕೃತಿ ನೀಡಿದ ಹೆಗ್ಗಳಿಕೆ, ಕನ್ನಡದ ಪಾಠ ಶಾಲೆ ಹಂದರಕಿ, ನೀಲಹಳ್ಳಿ- ಕೊಂಕನಳ್ಳಿ ರಾಷ್ಟ್ರಕೂಟರ ಟಂಕಶಾಲೆ, ಸೇಡಂ ಪಟ್ಟಣವು ರಾಣಿಯ ಅಂತ:ಪುರ, ಮೋತಕಪಲ್ಲಿಯ ಬಲಭೀಮಸೇನ ದೇವಾಲಯ, ಮುಧೋಳ ಮಣ್ಣಿನ ಕೋಟೆ ಮತ್ತು ಮೇದಕನ ಚನ್ನಕೇಶವ ಮತ್ತು ಭೂತನಾಥೇಶ್ವರ ದೇವಾಲಯಗಳು ಧರ್ಮ ಮತ್ತು ಆಧ್ಯಾತ್ಮದ ತಾಣಗಳಾಗಿ ಇತಿಹಾಸ ಪುಠದಲ್ಲಿ ರಾರಾಜಿಸಿವೆ. ಕನ್ನಡಿಗರ ಸಾಧನೆಗೆ ಮೇದಕನ ಭೂತೇಶ್ವರ ದೇವಾಲಯದ ವಾಸ್ತು ಶಿಲ್ಪ ಕಲೆಯೇ ನಿದರ್ಶನ, ಈ ದೇವಾಲಯದ ಹೊರಗೋಡೆಗಳು ಅಲಂಕಾರಗೊಂಡಿವೆ, ಮದನಿಕೆಯರ ಶಿಲ್ಪಗಳು, ರಾಮಾಯಣ ಮಹಾಭಾರತದ ದೃಶ್ಯಗಳು, ವೀರ ಕನ್ನಡಿಗರು ಅಶ್ವಪಡೆ, ಗಜಪಡೆಯ ಮೂಲಕ ಯುದ್ಧ ಮಾಡುವ ದೃಶ್ಯವನ್ನು ಶಿಲ್ಪದ ರೂಪದಲ್ಲಿ ಬಹಳ ಸುಂದರವಾಗಿ ಚಿತ್ರಿಸಲಾಗಿದೆ, ಇದೇ ಪರಿಸರದಲ್ಲಿ ವೀರಗಲ್ಲು ಮತ್ತು ಮಹಾಸತಿಗಲ್ಲುಗಳು ಗಮನ ಸೆಳೆಯುತ್ತಿವೆ, ಪ್ರಾಚೀನ ಕನ್ನಡಿಗರ ಕಲೆ, ವಾಸ್ತು ಶಿಲ್ಪ, ಸಾಹಿತ್ಯ, ಸಂಗೀತ, ಆಡಳಿತ, ರಾಜಪ್ರಭುತ್ವ ಸಾರುವ ದೇವಾಲಯಗಳು ಕನ್ನಡ ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ಈ ಪರಿಸರದಲ್ಲಿ ಇನ್ನೂ ಹೆಚ್ಚಿನ ಉತ್ಖನ ಮತ್ತು ಸಂಶೋಧನಾ ಕಾರ್ಯ ಅವಶ್ಯವಾಗಿದೆ ಎಂದರು.
ಕಲಬುರಗಿ ಬಸವೇಶ್ವರ ಸೇವಾ ಬಳಗದ ಅಧ್ಯಕ್ಷ ಹೆಚ್ ಬಿ ಪಾಟೀಲ ಮಾತನಾಡಿ, ದೂರ ಬೇಲೂರು, ಹಳೆಬೀಡಿಗೆ ಹೋಗುವ ಬದಲು ನಮ್ಮ ಪಕ್ಕದಲ್ಲಿರುವ ಮೇದಕನ ಭೂತನಾತೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿದರೆ ಖಂಡಿತ ಇಂತಹ ಅಪಾರ ಜ್ಞಾನ ದೊರೆಯುತ್ತದೆ, ನಮ್ಮ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ಐತಿಹಾಸಿಕ ದೇವಾಲಯಗಳ ಪರಿಚಯ ಮಾಡಿಸುವ ಕೆಲಸ ಮಾಡಬೇಕು. ಐತಿಹಾಸಿಕ ಪ್ರಜ್ಞೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು, ಸ್ಮಾರಕಗಳ ರಕ್ಷಣೆ ಪ್ರತಿಯಿಬ್ಬರು ಮಾಡಬೇಕು ಎಂದು ಅಭಿಮವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಬುರಾವ, ನರಸಪ್ಪ , ಚಿಮ್ಮಯ್ಯ ನಾಯಕ, ತಿಮ್ಮಪ್ಪ, ಹಂಸಪಾಲರೆಡ್ಡಿ ಸೇರಿದಂತೆ ಗ್ರಾಮಸ್ಥರು ಇದ್ದರು.